ಮೇಕೇರಿ ಗ್ರಾ.ಪಂ ನೂತನ ಸದಸ್ಯರಿಗೆ ವಿನಾಯಕ ಗೆಳೆಯರ ಬಳಗದಿಂದ ಸನ್ಮಾನ

January 9, 2021

ಮಡಿಕೇರಿ ಜ.9 : ಮೇಕೇರಿ ಗ್ರಾ.ಪಂ ಗೆ ನೂತನ ಸದಸ್ಯರಾಗಿ ಆಯ್ಕೆಗೊಂಡಿರುವ ಹಾಕತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ಮೇಕೇರಿ ಹನೀಫ್ ಹಾಗೂ ವಿನಾಯಕ ಗೆಳೆಯರ ಬಳಗದ ಅಧ್ಯಕ್ಷ ಬಿ.ಬಿ.ದಿನೇಶ್ ಅವರುಗಳನ್ನು ಮೇಕೇರಿ ಸುಭಾಷ್ ನಗರದ ವಿನಾಯಕ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯರಾದ ಹೆಚ್.ಸಿ.ಪೆÇನ್ನಪ್ಪ ಅವರು ಈ ಹಿಂದೆ ಗ್ರಾ.ಪಂ ಅಧ್ಯಕ್ಷರಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನರ ಪ್ರೀತಿ ಗಳಿಸಿದ್ದ ಹನೀಫ್ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡುವ ಮೂಲಕ ಗ್ರಾಮದ ಮತದಾರರು ಮತ್ತಷ್ಟು ಸೇವೆಗೆ ಅವಕಾಶ ಕಲ್ಪಿಸಿದ್ದಾರೆ ಎಂದರು. ಮತ್ತೊಬ್ಬ ಸದಸ್ಯ ಬಿ.ಬಿ.ದಿನೇಶ್ ಅವರು ಕೂಡ ಅಭಿವೃದ್ಧಿ ಪರ ಚಿಂತನೆ ಹೊಂದಿರುವ ಯುವ ಮುಖಂಡನಾಗಿದ್ದು, ಇವರಿಬ್ಬರು ಗ್ರಾಮದ ಏಳಿಗೆಗಾಗಿ ಶ್ರಮಿಸುತ್ತಾರೆ ಎನ್ನುವ ವಿಶ್ವಾಸವಿದೆ. ಹಾಗೆಯೇ ಗ್ರಾಮಸ್ಥರು ಕೂಡ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಪೊನ್ನಪ್ಪ ಕರೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹನೀಫ್ ಮೇಕೇರಿ ಗ್ರಾಮದ ಜನ ನನ್ನ ಮೇಲಿಟ್ಟಿರುವ ಭರವಸೆಯನ್ನು ಹುಸಿ ಮಾಡುವುದಿಲ್ಲವೆಂದರು. ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತಕ್ಕೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಬಿ.ಬಿ.ದಿನೇಶ್ ಮಾತನಾಡಿ ಜನರ ಸೇವೆ ಮಾಡಲು ಅವಕಾಶ ದೊರೆತ್ತಿದ್ದು, ಬದ್ಧತೆÉಯಿಂದ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು. ತಮ್ಮ ಗೆಲುವಿಗಾಗಿ ಹಗಲಿರುಳೆನ್ನದೆ ಶ್ರಮಿಸಿದ ಗೆಳೆಯರ ಬಳಗ ಮತ್ತು ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಹಿರಿಯರಾದ ಬಿ.ವಿ.ರಾಜು, ಉಸ್ಮಾನ್, ಸುಜಿತ್ ಕುಮಾರ್, ವಿನಾಯಕ ಗೆಳೆಯರ ಬಳಗದ ಪದಾಧಿಕಾರಿಗಳು, ಸದಸ್ಯರು, ಸುಭಾಷ್ ನಗರದ ನಾಗರೀಕರು ಉಪಸ್ಥಿತರಿದ್ದರು. ಬಳಗದ ಗೌರವ ಸಲಹೆಗಾರ ದಾಮೋದರ ರಾಮು ಕಾರ್ಯಕ್ರಮ ನಿರೂಪಿಸಿದರು.

error: Content is protected !!