ಕೊಡಗು ಜಿಲ್ಲಾ ಸರ್ವೋದಯ ಸಮಿತಿಯ ಮಹಾಸಭೆ

09/01/2021

ಮಡಿಕೇರಿ ಜ.9 : ಕೊಡಗು ಜಿಲ್ಲಾ ಸರ್ವೋದಯ ಸಮಿತಿಯ 2019-20ನೇ ಸಾಲಿನ ವಾರ್ಷಿಕ ಮಹಾಸಭೆ ನಗರದ ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್, ಗಾಂಧಿ ವಿಚಾರಧಾರೆಗಳು ಎಲ್ಲರನ್ನು ಮುಟ್ಟಬೇಕು. ಸರ್ವ ಜನರ ಏಳಿಗೆ, ಶ್ರೇಯಸ್ಸು, ಸರ್ವೇಜನ ಸುಖಿನೋಭವಂತು ಎಂಬ ಹಾರೈಕೆಯ ವಾಣಿಗೆ ಯಾವುದೇ ಜನಾಂಗೀಯ ಚೌಕಟ್ಟು, ಭೌಗೋಳಿಕ ಗಡಿ ಇರಬಾರದು. ಸಮಾನತೆ ಮತ್ತು ಪರಸ್ಪರ ಸೌಹಾರ್ದತೆಯ ಕನಸನ್ನು ನನಸು ಮಾಡುವ ಮತ್ತು ಆ ದಿಕ್ಕಿನಲ್ಲಿ ಸಾಗುವ ಪ್ರಯತ್ನಗಳಿಗೆ ಸ್ಫೂರ್ತಿಯನ್ನು ತುಂಬುವುದೇ ಸರ್ವೋದಯ ಸಮಿತಿಯ ಯುಗ ಮಂತ್ರ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಮುಂದಿನ ದಿನಗಳಲ್ಲಿ ಗಾಂಧಿ ವಿಚಾರಧಾರೆಗಳ ಬಗ್ಗೆ ಯುವ ಜನತೆಗೆ ತಿಳಿಸಲು ಮತ್ತು ಹೆಚ್ಚು ಆಕರ್ಷಿತರನ್ನಾಗಿ ಮಾಡಲು ಸಮಿತಿ ತನ್ನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಗಾಂಧಿ ಮಂಟಪದ ನವ ನಿರ್ಮಾಣ, ಪ್ರತಿಮೆ ಪ್ರತಿಷ್ಠಾಪನೆ ಮತ್ತು ಗಾಂಧಿ ಉದ್ಯಾನವನದ ರಚನೆಗೆ ಜಿಲ್ಲೆಯ ಶಾಸಕರುಗಳು ಹಾಗೂ ಪ್ರತಿನಿಧಿಗಳು ಒಲವು ತೋರಿದ್ದು, ಸರಕಾರದ ನೆರವಿನೊಂದಿಗೆ ಯೋಜನೆ ಕಾರ್ಯಗತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಿತಿಯ ಕೋಶಾಧಿಕಾರಿ ಕೋಡಿ ಚಂದ್ರಶೇಖರ್ ಹಿಂದಿನ ವರ್ಷದ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ಸರ್ವರನ್ನು ಸ್ವಾಗತಿಸಿ, ಹಿಂದಿನ ಸಾಲಿನ ವರದಿಯನ್ನು ಸಭೆಯ ಮುಂದಿಟ್ಟರು, ಕಾರ್ಯದರ್ಶಿ ಬೇಬಿ ಮ್ಯಾಥ್ಯು ವಂದಿಸಿದರು. ಸಮಿತಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಅಕಾಲಿಕ ಮರಣ ಹೊಂದಿದ ಎಂ.ಎ.ಉಸ್ಮಾನ್, ಬಿ.ಎ.ರಾಮಯ್ಯ ಹಾಗೂ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮೋಹನ್ ಮೊಣ್ಣಪ್ಪ ಅವರಿಗೆ ಸಭೆ ಶ್ರದ್ಧಾಂಜಲಿ ಅರ್ಪಿಸಿತು.