ಡಾ.ಕಸ್ತೂರಿ ರಂಗನ್ ವರದಿಗೆ ಸೋಮವಾರಪೇಟೆಯಲ್ಲಿ ತೀವ್ರ ವಿರೋಧ

10/01/2021

ಸೋಮವಾರಪೇಟೆ : ಅರಣ್ಯದಂಚಿನ ಗ್ರಾಮಗಳ ನಿವಾಸಿಗಳಿಗೆ ಮಾರಕವಾಗಿರುವ ಡಾ.ಕಸ್ತೂರಿ ರಂಗನ್ ವರದಿಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸದಂತೆ ಕುಮಾರಳ್ಳಿ, ಕೊತ್ನಳ್ಳಿ ವ್ಯಾಪ್ತಿಯ ಗ್ರಾಮಸ್ಥರು ಒತ್ತಾಯಿಸಿದರು.
ಕುಮಾರಳ್ಳಿ ಗ್ರಾಮಸ್ಥರ ಒಕ್ಕೂಟದ ವತಿಯಿಂದ ಹೆಗ್ಗಡಮನೆ ಶಾಂತಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಗ್ರಾಮಸ್ಥರು ತಮ್ಮ ಒತ್ತಾಯ ಮಂಡಿಸಿದರು.
ಕಸ್ತೂರಿರಂಗನ್ ವರದಿಯ ಅನುಷ್ಠಾನದ ಆತಂಕ ಪುಷ್ಪಗಿರಿ ತಪ್ಪಲಿನ ಗ್ರಾಮಗಳನ್ನು ಕಾಡುತ್ತಿದೆ. ಈಗಾಗಲೇ ಕುಮಾರಳ್ಳಿ, ಕೊತ್ನಳ್ಳಿ, ಗ್ರಾಮದ ನಿವಾಸಿಗಳ ಆರ್.ಟಿ.ಸಿ.ಯಲ್ಲಿ ಸಿ ಮತ್ತು ಡಿ ಎಂಬುದನ್ನು ತೆಗೆದು ಅರಣ್ಯ ಎಂಬುದಾಗಿ ಬರುತ್ತಿದೆ. ಆಸ್ತಿಯನ್ನು ಕಳೆದುಕೊಳ್ಳುವ ಭಯ ಕಾಡುತ್ತಿದೆ ಎಂದು ಬಿ.ಪಿ.ಅನಿಲ್ ಕುಮಾರ್ ಹೇಳಿದರು.
ಪುಷ್ಪಗಿರಿ ಅರಣ್ಯ ಸುತ್ತಮುತ್ತಲಿನ ಗ್ರಾಮಗಳ ಕೃಷಿಕರು 5ಎಕರೆ ಭೂಮಿ ಹೊಂದಿದ್ದರೆ, ಒಂದು ಎಕರೆಗೆ ಮಾತ್ರ ದಾಖಲಾತಿ ಇರುತ್ತದೆ. ಈ ಕಾರಣದಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬೇಕಾಗಿದೆ. ಆರ್.ಟಿ.ಸಿಯಲ್ಲಿ ಅರಣ್ಯ ಎಂಬುದನ್ನು ಸರ್ಕಾರ ತೆಗೆಯಬೇಕು. ಪೈಸಾರಿ ಎಂದು ನಮೂದಾಗಬೇಕು ಅಲ್ಲಿಯವರಗೆ ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಹೇಳಿದರು.
ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿ ಮತ್ತು ಡಿ ಭೂಮಿಯನ್ನು ಕಂದಾಯ ಇಲಾಖೆಗೆ ಸೇರ್ಪಡೆಗೊಳಿಸಿದೆ. ಆದರೆ ಕೊತ್ನಳ್ಳಿ, ಮತ್ತು ಕುಮಾರಳ್ಳಿ ಗ್ರಾಮಗಳು ಈ ಸೌಲಭ್ಯಗಳಿಂದ ವಂಚಿತವಾಗಿವೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಥಳೀಯ ಶಾಸಕರ ಅಪ್ಪಚ್ಚು ರಂಜನ್ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ವರದಿ ಅನುಷ್ಠಾನ ಮಾಡದಂತೆ ಈಗಾಗಲೇ ರಾಜ್ಯ ಸರ್ಕಾರದ ತೀರ್ಮಾನ ಕೈಗೊಂಡಿದೆ. ಪಶ್ಚಿಮಘಟ್ಟ ಅರಣ್ಯದ ಗಡಿಯನ್ನೇ ಸೂಕ್ಷ್ಮಪರಿಸರ ವಲಯ ಎಂದು ಗುರುತಿಸಬೇಕು. ಯಾವುದೇ ಕಾರಣಕ್ಕೂ ಸ್ಥಳೀಯ ಗ್ರಾಮಸ್ಥರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು. ಅರಣ್ಯ ಇಲಾಖೆಯವರು ಗ್ರಾಮಸ್ಥರಿಗೆ ಕಿರುಕುಳ ನೀಡಬಾರದು. ಮೀಸಲು ಅರಣ್ಯ ಗಡಿಯ ಹೋರಗೆ ಕೃಷಿ ಚಟುವಟಿಕೆ ಕೈಗೊಳ್ಳಲು ತೊಂದರೆ ನೀಡಬಾರದು ಎಂದು ಸೂಚಿಸಿದರು.
ಅರಣ್ಯದಂಚಿನ ಗ್ರಾಮದ ನಿವಾಸಿ ಸೌಲಭ್ಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ರವಿಕುಶಾಲಪ್ಪ ಹೇಳಿದರು. ಅರಣ್ಯ ಇಲಾಖೆಯವರು ಮಾನವೀಯತೆಯಿಂದ ಕೆಲಸ ಮಾಡಬೇಕು. ಸರ್ಕಾರದ ಕಾನೂನಿನ ಒಳಗಡೆ ಸೌಲಭ್ಯಗಳ ಪಡೆದುಕೊಳ್ಳಲು ಅನೇಕ ಮಾರ್ಗಗಳಿವೆ ಎಂದು ಹೇಳಿದರು. ಅಧಿಕಾರಿ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು. ಎರಡು ತಿಂಗಳಲ್ಲಿ ಮತ್ತೊಂದು ಸಭೆಯನ್ನು ಕರೆದು ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗುವುದು ಎಂದರು.
ಕುಮಾರಳ್ಳಿ ಗ್ರಾಮದ ಸ.ನಂ.1/9ಪಿ99 ರ ವಿಸ್ತೀರ್ಣ 11494 ಎಕರೆ ಭೂಪ್ರದೇಶವು 2019ರ ವರಗೆ ಕಂದಾಯ ಇಲಾಖೆಯಲ್ಲಿದ್ದು, 2020ರಲ್ಲಿ ಈ ಭೂಭಾಗವು ಅಧಿಕೃತ ಆದೇಶವಿಲ್ಲದೆ ಏಕೇಕಿ ಪುಷ್ಪಗಿರಿ ವನ್ಯಧಾಮಕ್ಕೆ ಸೇರ್ಪಡೆಯಾಗಿರುತ್ತದೆ. ಈ ಭೂಭಾಗಕ್ಕೆ ನಕಾಶೆಯಾಗಲಿ, ನಿರ್ದಿಷ್ಟ ಗಡಿರೇಖೆ ಇರುವುದಿಲ್ಲ. ಈಗ ಆರ್.ಟಿ.ಸಿಯಲ್ಲಿ ಅರಣ್ಯ ಎಂಬುದಾಗಿ ಬರುತ್ತಿದೆ. ತಕ್ಷಣವೇ ಗಡಿಯನ್ನು ಗುರುತಿಸಬೇಕು. ಜನವಸತಿ ಹಾಗು ವನ್ಯಜೀವಿ ಘಟಕಕ್ಕೆ ಸೇರಿದ ಭೂಭಾಗವನ್ನು ಬೇರ್ಪಡಿಸಬೇಕು ಎಂದು ಕೊತ್ನಳ್ಳಿ ಅರುಣ್ ಮತ್ತು ಕಿರಣ್ ಮತ್ತಿತರರು ಒತ್ತಾಯಿಸಿದರು.
ಪುಷ್ಪಗಿರಿ ವನ್ಯಜೀವಿಧಾಮದ ಜಾಗ 8,756 ಎಕರೆ, ಈಗ 11,494 ಎಕರೆ ವನ್ಯಧಾಮದ ವ್ಯಾಪ್ತಿಯಲ್ಲಿದೆ. ಹೆಚ್ವುವರಿ 2737 ಎಕರೆ ಜಾಗವನ್ನು ನಿಯಮಾನುಸರವಾಗಿ ಕಂದಾಯ ಇಲಾಖೆಗೆ ಬಿಟ್ಟುಕೊಡಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಗ್ರಾಮಸ್ಥರಿಗೆ ಭರವಸೆ ನೀಡಿದರು.
2737 ಎಕರೆ ಜಾಗವನ್ನು ಕಂದಾಯ ಇಲಾಖೆಗೆ ಪಡೆದುಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭ ತಹಸೀಲ್ದಾರ್ ಗೋವಿಂದರಾಜು ಹೇಳಿದರು. ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫಾರಂ ನಂ.57ರಲ್ಲಿ 340 ಅರ್ಜಿಗಳು ಹಾಗು 94/ಸಿಯಲ್ಲಿ 260 ಅರ್ಜಿಗಳು ಸ್ವೀಕೃತವಾಗಿದ್ದು, ಮುಂದಿನ ದಿನಗಳಲ್ಲಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಹೇಳಿದರು.
ವನ್ಯಧಾಮದಲ್ಲಿ ಸೇರ್ಪಡೆಗೊಂಡಿರುವ ಜಾಗ ಕಂದಾಯ ಇಲಾಖೆಗೆ ಬಂದರೆ, ಆರ್.ಟಿ.ಸಿಯಲ್ಲಿ ಅರಣ್ಯದ ಬದಲಾಗಿ ಪೈಸಾರಿ ಎಂದು ಬರುತ್ತದೆ ನಂತರ ದೊಡ್ಡ ಸಮಸ್ಯೆ ಬಗೆಹರಿಯುತ್ತದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು.
ಹೆಗ್ಗಡಮನೆ, ಸುಬ್ರಮಣ್ಯ ರಸ್ತೆಯನ್ನು ನಿರ್ಮಾಣವಾದರೆ, ಪ್ರವಾಸೋಧ್ಯಮ ಬೆಳೆವಣಿಗೆ ಸಾಧ್ಯವಾಗಲಿದೆ. ಶೀಘ್ರ ಹಕ್ಕುಪತ್ರ ವಿತರಿಸಬೇಕು. ಬೆಳೆ ರಕ್ಷಣೆಗೆ ಕೋವಿ ಪರವಾನಗಿ ನಿಯಮ ಸರಳೀಕರಿಸಿ ನೀಡಬೇಕು. ಮಲ್ಲಳ್ಳಿ ಗ್ರಾಮದ ರಸ್ತೆ ಡಾಮರೀಕರಣಗೊಳ್ಳಬೇಕು. ಮಲ್ಲಳ್ಳಿ ಜಲಪಾತದಲ್ಲಿ ಕೇಬಲ್ ಕಾರು ಯೋಜನೆ ರೂಪಿಸಬೇಕು ಎಂದು ಗ್ರಾಮಸ್ಥರು ಹಲವು ಬೇಡಿಕೆಗಳನ್ನು ಇಟ್ಟರು.
ಸಭೆಯಲ್ಲಿ ದೇವಾಲಯ ಸಮಿತಿ ಅಧ್ಯಕ್ಷರಾದ ಟಿ.ಪಿ.ಚಂಗಪ್ಪ, ಜಿಪಂ ಸದಸ್ಯ ಬಿ.ಜೆ.ದೀಪಕ್, ತಾಪಂ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್, ಸದಸ್ಯ ಬಿ.ಎ.ಧರ್ಮಪ್ಪ, ಉದ್ಯಮಿ ಹರಪಳ್ಳಿ ರವೀಂದ್ರ ಇದ್ದರು.