ಕಾಫಿ ಬೆಳೆಗಾರರನ್ನೇ ಉದ್ಯಮಿಗಳನ್ನಾಗಿ ರೂಪಿಸಲಾಗುವುದು : ರೈತ ಮೋರ್ಚಾದ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ

January 10, 2021

ಮಡಿಕೇರಿ ಜ.10 : ಕೊಡಗಿನಲ್ಲಿ ಕಾಫಿಯನ್ನು ಒಂದು ಉದ್ಯಮ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಕೆಲವು ಸಮಸ್ಯೆಗಳು ಪರಿಹಾರವಾಗದೆ ಉಳಿದಿವೆ. ಈ ಕಾರಣದಿಂದ ರೈತರನ್ನೇ ಉದ್ಯಮಿಗಳನ್ನಾಗಿಸುವ ರೈತ ಉತ್ಪಾದಕ ಸಂಸ್ಥೆಗಳ ಆರಂಭಕ್ಕೆ ಕೂಡ ಚಿಂತನೆ ಮಾಡಲಾಗಿದೆ ಎಂದು ರಾಜ್ಯಸಭಾ ಸದಸ್ಯ, ರಾಜ್ಯ ಬಿಜೆಪಿಯ ರೈತ ಮೋರ್ಚಾದ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದ್ದಾರೆ.
ಮಡಿಕೇರಿಯಲ್ಲಿ ರೈತ ಮೋರ್ಚಾದ ರೈತ ಜಾಗೃತಿ ಅಭಿಯಾನ ಮತ್ತು ಜಿಲ್ಲಾ ಕಾರ್ಯಕಾರಿಣಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈರಣ್ಣ ಕಡಾಡಿ, ಕಾಫಿ ಕೃಷಿ ಇಂದು ಉದ್ಯಮವಾಗಿ ಬದಲಾಗಿದೆ. ಕೆಲವು ಉದ್ಯಮಿಗಳು ಮಾತ್ರವೇ ಇದರ ಲಾಭ ಪಡೆಯುತ್ತಿರುವುದು ತನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರನ್ನೇ ಉದ್ಯಮಿಗಳಾಗಿ ರೂಪಿಸಲು ಯೋಜನೆ ಹಮ್ಮಿ ಕೊಳ್ಳಲಾಗುತ್ತದೆ ಎಂದು ಹೇಳಿದರು.
ಕಾಫಿ ಕೃಷಿ ಮತ್ತು ಕಾಫಿ ಮಂಡಳಿಯ ಇತ್ತೀಚಿನ ಬೆಳವಣಿಗೆ ಕುರಿತು ತನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಕೇಂದ್ರ ವಾಣಿಜ್ಯ ಇಲಾಖೆ ಮತ್ತು ಕೃಷಿ ಇಲಾಖೆಯೊಂದಿಗೆ ನೇರವಾಗಿ ಸಂಪರ್ಕಿಸುವ ಮತ್ತು ಮಲೆನಾಡು ಪ್ರದೇಶಗಳಿಗೆ ಸಂಬಂಧಿಸಿದಂತೆ ಕೃಷಿ ಮತ್ತು ಸಮಸ್ಯೆಗಳ ಕುರಿತು ಪ್ರತ್ಯೇಕ ಸಭೆ ಮಾಡುವ ನಿಟ್ಟಿನಲ್ಲಿ ಕೂಡ ಚಿಂತನೆ ಹರಿಸಲಾಗುವುದು ಎಂದು ಈರಣ್ಣ ಕಡಾಡಿ ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ, ಕಾಫಿ ಬೆಳೆಗಾರರ ಸಮಸ್ಯೆ, ಭತ್ತ, ಕರಿಮೆಣಸು ಬೆಳೆಗಳ ಬೆಲೆ ಏರುಪೇರು, 10 ಹೆಚ್.ಪಿ ವಿದ್ಯುತ್ ಪಂಪ್ ಸೆಟ್‍ಗೆ ಉಚಿತ ವಿದ್ಯುತ್ ಪೂರೈಕೆ ಮೊದಲಾದವುಗಳನ್ನು ಗಮನಿಸಿದ್ದೇನೆ. ರೈತ ಮೋರ್ಚಾ ಸರ್ಕಾರ ಮತ್ತು ರೈತರ ನಡುವೆ ರಾಯಭಾರಿಯಂತೆ ಕೆಲಸ ಮಾಡಲಿದ್ದು, ಸಮಸ್ಯೆಗಳ ಪರಿಹಾರ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ನೇರ ಮಾಹಿತಿ ಕೊಡುವ ಪ್ರಯತ್ನವನ್ನು ಮಾಡುತ್ತೇನೆ ಎಂದು ಈರಣ್ಣ ಕಡಾಡಿ ಹೇಳಿದರು.
ಕಸ್ತೂರಿ ರಂಗನ್ ವರದಿ ಕುರಿತು ಪ್ರತಿಕ್ರಿಯಿಸಿದ ಈರಣ್ಣ ಕಡಾಡಿ, ಕಾನೂನುಗಳಿರುವುದು ಜನರ ರಕ್ಷಣೆಗಾಗಿ. ಕಸ್ತೂರಿ ರಂಗನ್ ವರದಿ ಮರು ಪರಿಶೀಲನೆಗೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಕ್ಕೆ ಮತ್ತೊಮ್ಮೆ ಮನವರಿಕೆ ಮಾಡಲು ಸಾಧ್ಯವಿದೆ. ಶಿವಮೊಗ್ಗದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ಇದೂ ಅವರಿಗೆ ಕೃಷಿ ಮತ್ತು ರೈತರ ಪರವಿರುವ ಬದ್ದತೆಯನ್ನು ತೋರಿಸುತ್ತದೆ ಎಂದು ಈರಣ್ಣ ಕಡಾಡಿ ಸ್ಪಷ್ಟವಾಗಿ ನುಡಿದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಲೋಕೇಶ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಹೊನ್ನಾಳಿ, ಶಿವಪ್ರಕಾಶ್, ರಾಜ್ಯ ಕಾರ್ಯದರ್ಶಿ ಡಾ. ಬಿ.ಸಿ. ನವೀನ್ ಕುಮಾರ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಕೃಷಿ ಮೋರ್ಚದ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಯುಮುನಾ ಚಂಗಪ್ಪ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.

error: Content is protected !!