ಹೋಂಸ್ಟೇಯಲ್ಲಿ ಅಕ್ರಮ ಚಟುವಟಿಕೆ : ಆರ್ಜಿ ಗ್ರಾಮದಲ್ಲಿ ಮೂವರ ಬಂಧನ

ಮಡಿಕೇರಿ ಜ.10 : ಹೋಂಸ್ಟೇಯಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆ ಆರ್ಜಿ ಗ್ರಾಮದ ಹೋಂಸ್ಟೇಯೊಂದರ ಮಾಲೀಕ, ಆತನ ಪತ್ನಿ ಹಾಗೂ ಸಹಕರಿಸಿದ ಆಟೋ ಚಾಲಕನನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ದಾಳಿ ಸಂದರ್ಭ ಕುಶಾಲನಗರ ಮೂಲದ ಓರ್ವ ಮಹಿಳೆ ಹಾಗೂ ಕೇರಳದ ಇಬ್ಬರು ಪುರುಷರು ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ತಕ್ಷಣ ಹೋಂಸ್ಟೇ ಮಾಲೀಕನ ಪತ್ನಿ ಹಾಗೂ ಕುಶಾಲನಗರ ಮೂಲದ ಆಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದರು. ತಲೆ ಮರೆಸಿಕೊಂಡಿದ್ದ ಮಾಲೀಕನನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಕೇರಳದ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಮಹಿಳೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ. ಈ ಹಿಂದೆಯೂ ಇದೇ ಹೋಂಸ್ಟೇ ವಿರುದ್ಧ ಅಕ್ರಮ ಚಟುವಟಿಕೆ ಕುರಿತು ಪ್ರಕರಣ ದಾಖಲಾಗಿತ್ತು. ಮತ್ತೆ ನಿಯಮ ಬಾಹಿರ ಚಟುವಟಿಕೆ ನಡೆಯುತ್ತಿರುವುದು ಬಹಿರಂಗವಾಗಿದ್ದು, ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕೃತಿ ಸಿರಿಯ ಮೂಲಕ ಪ್ರವಾಸೋದ್ಯಮದಲ್ಲಿ ಬೆಳವಣಿಗೆಯನ್ನು ಕಾಣುತ್ತಿರುವ ಕೊಡಗು ಜಿಲ್ಲೆಯ ಕೆಲವು ಹೋಂಸ್ಟೇಗಳು ಅಕ್ರಮ ಚಟುವಟಿಕೆಗಳ ಕೇಂದ್ರವಾಗುತ್ತಿದ್ದು, ಈ ಬೆಳವಣಿಗೆ ಕಾವೇರಿ ನಾಡಿಗೆ ಕಪ್ಪು ಚುಕ್ಕೆ ಮೂಡಿಸುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರ ಆದೇಶದಂತೆ ವಿರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣಾಧಿಕಾರಿಗಳಾದ ಜಗದೀಶ್ ಧೂಳ ಶೆಟ್ಟಿ, ಅಪರಾಧ ವಿಭಾಗದ ನಿರೀಕ್ಷಕ ಹೆಚ್.ಎಸ್.ಬೋಜಪ್ಪ, ಸಿಬ್ಬಂದಿಗಳಾದ ಮುಸ್ತಫ, ಗೀರಿಶ್, ಎನ್.ಎಸ್.ಲೋಕೇಶ್, ಮಹಿಳಾ ಸಿಬ್ಬಂದಿ ನಳಿನಿ, ಚಾಲಕರುಗಳಾದ ಪೂವಯ್ಯ ಹಾಗೂ ಗೋಫಿನಾಥ್ ಅವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.