ಮಡಿಕೇರಿಯಲ್ಲಿ ರೈತ ಮೋರ್ಚಾ ಜಾಗೃತಿ ಅಭಿಯಾನ : ಯುವ ಸಮೂಹ ಕೃಷಿಯತ್ತ ಆಸಕ್ತಿ ತೋರುತ್ತಿದೆ : ಈರಣ್ಣ ಕಡಾಡಿ ಅಭಿಪ್ರಾಯ

10/01/2021

ಮಡಿಕೇರಿ ಜ.10 : ನಾಗರಿಕ ಸಮಾಜ ಕೃಷಿಯನ್ನೆ ನಂಬಿ ಬದುಕಿ ಕಟ್ಟಿಕೊಂಡಿತ್ತಾದರೂ, ಆಧುನಿಕ ಜಗತ್ತು ಕೃಷಿ ಲಾಭದಾಯಕವಲ್ಲ ಎಂದು ವಿವಿಧ ಹಾದಿಗಳನ್ನು ಹಿಡಿದಿತ್ತು. ಆದರೆ ಇಂದು ಯುವ ಸಮಾಜ ಮತ್ತೆ ಕೃಷಿಯತ್ತ ಆಸಕ್ತಿ ವಹಿಸುತ್ತಿದೆ ಎಂದು ರೈತ ಮೋರ್ಚಾದ ಅಧ್ಯಕ್ಷ ಮತ್ತು ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ಮಡಿಕೇರಿಯ ಭಾರತೀಯ ವಿದ್ಯಾ ಭವನದಲ್ಲಿ ಭಾನುವಾರ ರೈತ ಮೋರ್ಚಾದ ರೈತ ಜಾಗೃತಿ ಅಭಿಯಾನ ಮತ್ತು ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೋವಿಡ್-19 ಎಲ್ಲ ಕ್ಷೇತ್ರಗಳಿಗೆ ಪೆಟ್ಟು ನೀಡಿತ್ತು. ಹಲವರ ಉದ್ಯೋಗ ಕಸಿದುಕೊಳ್ಳುವಂತೆ ಆಯಿತು, ಆದರೆ, ಕೃಷಿ ಕ್ಷೇತ್ರವನ್ನು ಕೋವಿಡ್ ಏನು ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಕೃಷಿ ಬದುಕಿನ ಕಡೆಗೆ ಆಸಕ್ತಿ ಹೊಂದಿರುವವರನ್ನು ಬೆಳೆಸುವ ಕಾರ್ಯ ಕೃಷಿ ಮೋರ್ಚಾದಿಂದ ಆಗಬೇಕಿದೆ. ಸರ್ಕಾರದ ಯೋಜನೆಗಳ ಬಗ್ಗೆ ರೈತರಿಗೆ ತಿಳಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸಕ್ಕೆ ತಯಾರಾಗಬೇಕಿದೆ ಎಂದು ಕರೆ ನೀಡಿದರು.
ದೇಶದಲ್ಲಿ 145ಕೋಟಿ ಜನಸಂಖ್ಯೆಯ ಪೈಕಿ 60ಕೋಟಿ ಜನ ಬೇಸಾಯವನ್ನು ನಂಬಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಇದ್ದಾಗ ಶೇ.11ರಷ್ಟಿದ್ದ ಜಿಡಿಪಿ ಪ್ರಮಾಣ ಶೇ.18ರಷ್ಟು ಏರಿಕೆ ಮಾಡಲಾಗುತ್ತಿದೆ. ಆರ್ಥಿಕವಾಗಿ ಚೇತರಿಕೆ ಕಾಣಲು ಹಲವಾರು ಯೋಜನೆಗಳನ್ನು ತಂದಿದೆ ಎಂದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ವಾಮಿನಾಥನ್ ವರದಿಯನ್ನು ಸಲ್ಲಿಸಿ ಅನುಮೋದನೆ ಪಡೆದಿತ್ತದ್ದರೂ, ಆದೂ ಕಾರ್ಯರೂಪಕ್ಕೆ ಬರಿಸಲು ಸಾಧ್ಯವಾಗಿರಲಿಲ್ಲ. ನಂತರ ಇದನ್ನು ಕಾರ್ಯರೂಪಕ್ಕೆ ತರಲು ಪ್ರಧಾನಿ ಮೋದಿ ಅವರು ಬರಬೇಕಾಯಿತು. ಆದಾಯವನ್ನು ದ್ವಿಗುಣಗೊಳಿಬೇಕೆನ್ನುವ ರೈತ ಪರ ನಿಲುವುಗಳನ್ನು ಬಿಜೆಪಿ ಸರ್ಕಾರ ಹೊಂದಿದ್ದು, ಆದ್ದರಿಂದ ಯುವ ಮೋರ್ಚಾದ ಪದಾಧಿಕಾರಿಗಳು ರೈತರಿಗೆ ಯೋಜನೆ ಅಥವಾ ನೂತನ ಮಸೂದೆಗಳ ಬಗ್ಗೆ ತಿಳಿ ಹೇಳಬೇಕಿದೆ ಎಂದು ಸೂಚಿಸಿದರು.
ಕೃಷಿ ಮೋರ್ಚಾವು ಸರ್ಕಾರದ ರೈತ ಪರ ಯೋಜನೆ ಹಾಗೂ ನೂತನ ಕಾಯ್ದೆಯಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಕಾಯ್ರ್ಯೋನ್ಮುಖವಾಗಬೇಕು, ವಾರದಲ್ಲಿ ಒಂದು ಸಲ ಸಭೆ ಮಾಡಬೇಕು, 15ದಿನಗಳಿಗೊಮ್ಮೆ ಕಾರ್ಯಕರ್ತರ ಸಭೆ, ತಿಂಗಳಿಗೊಮ್ಮೆ ಕಾರ್ಯಕಾರಿಣಿ ಸಭೆ ಮಾಡಬೇಕು ಎಂದು ಸೂಚಿದರು.
ಕೃಷಿ ಪ್ರಧಾನವಾದ ದೇಶದಲ್ಲಿ ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಪ್ರತಿಯೊಬ್ಬ ಕೃಷಿಕನು ಸ್ವಾವಲಂಭಿ ಹಾಗೂ ಸ್ವಾಭಿಮಾನ ಬದುಕನ್ನು ಕಟ್ಟಿಕೊಳ್ಳಬೇಕಿರುವುದರಿಂದ ಸರ್ಕಾರದ ನೀಡಿರುವ ಕೃಷಿಪರ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೃಷಿ ವಲಯದಲ್ಲಿ ಪ್ರಗತಿ ಸಾಧಿಸಲು ರೈತರಿಗೆ ಕೃಷಿ ಪ್ರಧಾನವಾದ ಬಜೇಟ್‍ಗಳನ್ನು ಘೋಷಿಸಲಾಗಿತ್ತು. ರಾಜ್ಯದಲ್ಲಿಯೂ ಕೃಷಿಗೆ ಪ್ರತ್ಯೇಕ ಬಜೆಟ್ ಆಗಿತ್ತು. ಒಟ್ಟಾರೆ ಬಿಜೆಪಿ ಸರ್ಕಾರ ಕೃಷಿಗೆ ಹೆಚ್ಚು ಒತ್ತು ನೀಡಿದೆ ಎಂದು ಹೇಳಿದರು.
ಆದರೆ, ಇತ್ತೀಚೆಗೆ ಕೃಷಿ ಕೇತ್ರ ನಷ್ಟದಲ್ಲಿ ಸಾಗಿದೆ. ಹವಾಮಾನ ವೈಪರೀತ್ಯ, ಅಕಾಲಿಕ ಮಳೆ, ಕಾಡಾನೆ ಹಾವಳಿ, ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಾರರಿಗೆ ಸರಿಯಾದ ಫಸಲು ಸಿಗುತ್ತಿಲ್ಲ. ಈ ನಡುವೆ ಕೋವಿಡ್-19, ಪ್ರಕೃತಿ ವಿಕೋಪದಂತಹ ಸಮಸ್ಯೆಗಳ ಬಗ್ಗೆ ರೈತರು ಇನ್ನಷ್ಟು ಕಂಗಾಲಾಗಿದ್ದಾರೆ. ಒಟ್ಟಿನಲ್ಲಿ ರೈತರ ಈ ಎಲ್ಲ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ನಡೆದಿದೆ ಎಂದು ಶಾಸಕರು ಹೇಳಿದರು.
ಕೃಷಿ ಕೇತ್ರದಲ್ಲಿ ರೈತರ ಅಭಿವೃದ್ಧಿ ಮತ್ತು ಆರ್ಥಿಕವಾಗಿ ಸದೃಡವಾಗಲೆಂದೆ ನೂತನ ಕಾಯ್ದೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಇದರಲ್ಲಿ ಕೃಷಿ ಮಸೂದೆ ಕಾಯ್ದೆ, ಕೃಷಿ ಉತ್ಪನ್ನ ಮಾರಾಟ ಕಾಯ್ದೆ, ಭೂ ಸುದಾರಣ ಕಾಯ್ದೆಯನ್ನು ತಂದಿದೆ. ಈ ಕಾಯ್ದೆಗಳು ಕೃಷಿಕರಿಗೆ ಲಾಭದಾಯಕವಾಗಿದ್ದು, ಈ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕೆಲಸ ಕೃಷಿ ಮೋರ್ಚದಿಂದ ಆಗಬೇಕು ಎಂದು ಕೋರಿದರು. ಕಾಯ್ದೆಯಡಿ ಬೆಂಬಲ ಬೆಲೆ ವಿಧಿಸುವ, ಆವೃತ್ತಿ ನಿಧಿಗಳ ಪರಿಗಣಿಸಿದೆ ಎಂದು ಹೇಳಿದರು.
ಕೃಷಿ ಕಾಯ್ದೆ ಬಗ್ಗೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿದೆ. ದಳ್ಳಾಳಿಗಳ ಪರ ವಿರೋಧ ಪಕ್ಷಗಳು ನಿಂತಿದ್ದು, ಪ್ರತಿಭಟನೆ ಹೋರಾಟಗಳ ಮೂಲಕ ಅಪಪ್ರಚಾರ ಮಡುತ್ತಿದ್ದಾರೆ ಎಂದು ಆರೋಪಿಸಿದರು.
ಗೋಹತ್ಯೆ ಕಾಯ್ದೆಯನ್ನು ಜಾರಿಗೆ ತಂದಿದೆಯಾದರೂ, ಇದರ ಅನುಷ್ಠಾನದ ಜವಾಬ್ದಾರಿ ಪ್ರತಿ ನಾಗರಿಗರ ಮೇಲಿದೆ. ಗೋವು ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಗೋಶಾಲೆಯನ್ನು ತೆರೆಬೇಕಿದೆ. ಗೋಶಾಲೆ ಸ್ಥಾಪಿಸಲು ಖಾಸಗಿ ಜಮೀನು ಪಡೆಯಲು ಸಹಾಯಧನ ನೀಡುವ ಚಿಂತನೆಯಲ್ಲಿ ಸರ್ಕಾರ ಬಂದಿದೆ ಎಂದರು.
ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಮಾತನಾಡಿ, ದೇಶದಲ್ಲಿ ಹೆಚ್ಚು ರೈತರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇದನ್ನು ಮನಗಂಡು ರೈತರ ಸಂಕಷ್ಟಕ್ಕೆ ನೆರವಾಗಲೆಂದೆ ಬಿಜೆಪಿ ಪಕ್ಷ ರೈತ ಮೋರ್ಚಾವನ್ನು ತಂದಿದೆ. ಆದ್ದರಿಂದ ರೈತ ಮೋರ್ಚಾದ ಪದಾಧಿಕಾರಿಗಳಾದವರು ರೈತರಿಗೆ ತಂದಿರುವ ಯೋಜನೆ ಸೇರಿದಂತೆ ಐತಿಹಾಸಿಕ ಕೃಷಿ ಮಸೂದೆಗ¼ ಬಗ್ಗೆ ತಿಳಿಹೇಳಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪದಾಧಿಕಾರಿಗಳ ಪಕ್ಷದ ಸೂಚನೆಯಂತೆ ಸಭೆ ನಡೆಸಬೇಕು, ಕಾರ್ಯಕರಣಿ ಮಂಡಲ ಜವಾಬ್ದಾರಿಯನ್ನು ಹಂಚುವಿಕೆಯ ಕೆಲಸ ಆಗಬೇಕು, ಪ್ರಮುಖವಾಗಿ ರೈತರ ಬಗ್ಗೆ ಕಾಳಜಿವಿರುವವರು ಬೂತ್ ಮಟ್ಟದಲ್ಲಿ ತಂಡಗಳನ್ನು ರಚಿಸಬೇಕಿದೆ ಎಂದು ಕೋರಿದರು.
ರಾಜ್ಯ ಕಾರ್ಯದರ್ಶಿ ಡಾ. ಬಿ.ಸಿ. ನವೀನ್ ಕುಮಾರ್ ಮಾತನಾಡಿ, ರೈತ ಮೋರ್ಚಾಕ್ಕೆ ಸುಗ್ಗಿ ಕಾಲ ಬಂದಿದೆ. ಇದಕ್ಕೆ ಮುಖ್ಯ ಕಾರಣ, 1947ರಲ್ಲಿ ರೈತರ ಆರ್ಥಿಕತೆಯ ಬಗ್ಗೆ ಚಿಂತನೆ ನಡೆಸುತ್ತಿದ್ದರೂ, ಸುಮಾರು 73ವರ್ಷಗಳ ಬಳಿಕ ರೈತರ ಆರ್ಥಿಕತೆಯಲ್ಲಿ ಬದಲಾವಣೆ ತರಲು ಪ್ರಯತ್ನಗಳು ನಡೆದಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಹೊಸ ಪ್ರಯೋಗಗಳು ಬಾಜಪದ ಕೃಷಿ ಮೋರ್ಚಾಗಳ ಮೂಲಕ ಆಗುತ್ತಿದೆ. 2014ರಲ್ಲಿ ಅಧಿಕಾರ ಪಡೆದ ಅವರು 2022ರ ವೇಳೆಗೆ ಪ್ರತಿ ರೈತನ ಆಧಾಯ ದ್ವಿಗುಣಗೊಳಿಸುವಲ್ಲಿ ಪ್ರಯತ್ನ ಸಾಗಿದೆ. ಬೀಜಗಳ ಉತ್ಮಾದನೆ, ಗೊಬ್ಬರ, ನೀರಾವರಿ, ಮಾರುಕಟ್ಟೆ ವ್ಯವಸ್ಥೆ, ಬೆಂಬಲ ಬೆಲೆಗಳನ್ನು ರೈತರಿಗೆ ಸಕಾಲದಲ್ಲಿ ನೀಡುವ ವ್ಯವಸ್ಥೆ ಆಗಬೇಕು ಎಂದರು.
ರೈತರಲ್ಲಿ ನೂತನ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಬೇಕಿದೆ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ರೈತರ ಮನೆ ಭಾಗಿಲಿಗೆ ತಿಳಿಸುವ ಮತ್ತು ಮುಟ್ಟಿಸುವ ಕೆಲಸ ಸಕಾಲದಲ್ಲಿ ಆದಲ್ಲಿ ಮಾತ್ರ ರೈತರ ಅಭಿವೃದ್ಧಿಯೂ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಜಿಲ್ಲೆಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ 74 ಗ್ರಾ.ಪಂಗಳಲ್ಲಿ ಬಿಜೆಪಿ ಬೆಂಬಲಿತ ಪಕ್ಷ ಅಧಿಕಾರ ಪಡೆದಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿಯೂ ಅಧಿಕಾರ ಪಡೆಯುವ ನಿರೀಕ್ಷೆ ಇದೆ. ರೈತರ ಪರ ಕಾಳಜಿಯನ್ನು ಕೃಷಿ ಮೋರ್ಚಾ ಬೆಳೆಸಿಕೊಂಡು ರೈತರ ಏಳಿಗೆಗೆ ಶ್ರಮಿಸಬೇಕಿದೆ ಎಂದು ಕರೆ ನೀಡಿದರು.
ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಜಿಲ್ಲೆಯಲ್ಲಿ ಕಾಡಾನೆ, ಹುಲಿ ಮತ್ತಿತ್ತರ ಕಾಡು ಪ್ರಾಣಿಗಳಿಂದ ಜನರ ನಿದ್ದೆ ಗೆಡಿಸಿದೆ. ಅಕಾಲಿಕ ಮಳೆಯಿಂದ ಕಾಫಿ ಬೆಳೆಯೂ ನಾಶದತ್ತ ಸಾಗಿದ್ದು, ಕೃಷಿ ಮೋರ್ಚಾದ ಪದಾಧಿಕಾರಿಗಳು ಈ ಬಗ್ಗೆ ಎಚ್ಚರಗೊಂಡು ಒಗ್ಗಟ್ಟಿನಿಂದ ಕೃಷಿಕರ ಪರ ದುಡಿಯಬೇಕಿದೆ ಎಂದರು.
ರೈತ ಮೋರ್ಚಾ ಉಪಾಧ್ಯಕ್ಷ ಲೋಕೇಶ್ ಗೌಡ, ತೀರ್ಥರಾಮ್, ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ಡಾ.ನವೀನ್, ಖಜಾಂಜಿ ಲತೀಶ್ ರೆಡ್ಡಿ, ಕಾರ್ಯಕಾರಿ ಸಮಿತಿ ಸದಸ್ಯೆ ಯಮುನಾ ಚಂಗಪ್ಪ, ಪ್ರಮುಖರಾದ ದಿನೇಶ್, ಕಬೀರ್ ದಾಸ್ ಹಾಜರಿದ್ದರು.