ಬೋಟ್‌ನಲ್ಲಿ ಸಿಲಿಂಡರ್ ಸ್ಫೋಟ : ಮೀನುಗಾರನನ್ನು ರಕ್ಷಿಸಿದ ಕೋಸ್ಟ್‌ಗಾರ್ಡ್

January 11, 2021

ಮಂಗಳೂರು ಜ. 11 : ತಟದಿಂದ ಸುಮಾರು 140 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ವೊಂದರಲ್ಲಿ ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಗಂಭೀರ ಗಾಯಗೊಂಡ ಮೀನುಗಾರರನ್ನು ಕೋಸ್ಟ್‌ಗಾರ್ಡ್ ರಕ್ಷಣೆ ಮಾಡಿದೆ.

ತಮಿಳುನಾಡು ಮೂಲದ ಮೀನುಗಾರಿಕಾ ದೋಣಿ ಮಂಗಳೂರಿನಿಂದ ಪಶ್ಚಿಮಕ್ಕೆ ಮೀನುಗಾರಿಕೆ ನಡೆಸುತ್ತಿದ್ದು, ಈ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಒಬ್ಬರು ಗಂಭೀರ ಗಾಯಗೊಂಡಿದ್ದರು. ಈ ಸಂದರ್ಭ ಬೋಟ್‌ನಲ್ಲಿದ್ದವರು ಕೋಸ್ಟ್‌ಗಾರ್ಡ್‌ಗೆ ಅಪಾಯದ ಸಂದೇಶ ರವಾನಿಸಿದ್ದಾರೆ. ವಿಷಯ ತಿಳಿದ ಕೂಡಲೇ ಮುಂಬಯಿ ಕರಾವಳಿ ರಕ್ಷಣಾ ಪಡೆಯಿಂದ ಸಾಚೇತ್ ಮತ್ತು ಸುಜೀತ್ ಎನ್ನುವ ಎರಡು ಕಾವಲು ನೌಕೆಗಳನ್ನು ಸಹಾಯಕ್ಕಾಗಿ ಕಳುಹಿಸಲಾಯಿತು.

ಅಲ್ಲದೆ ಅಪಾಯಕ್ಕೆ ಸಿಲುಕಿದ್ದ ಬೋಟ್‌ನ ತ್ವರಿತ ಪತ್ತೆಗಾಗಿ ಡಾರ್ನಿಯರ್ ವಿಮಾನವನ್ನು ಆ ಪ್ರದೇಶಕ್ಕೆ ಕಳುಹಿಸಲಾಯಿತು. ಕೆಲವೇ ಸಮಯದಲ್ಲಿ ಬೋಟ್ ಜತೆ ಸಂಪರ್ಕ ಸಾಧಿಸಿ ಮೀನುಗಾರರಿಗೆ ಧೈರ್ಯ ತುಂಬಲಾಯಿತು. ಘಟನಾ ಸ್ಥಳಕ್ಕೆ ಕರಾವಳಿ ಕೋಸ್ಟ್‌ಗಾರ್ಡ್ ನೌಕೆಗಳೆರಡೂ ತಲಪಿದ್ದು, ತೀವ್ರ ಗಾಯಗೊಂಡವನ್ನು ಪ್ರಥಮ ಚಿಕಿತ್ಸೆಗೊಳಪಡಿಸಿ ಕೋಸ್ಟ್‌ಗಾರ್ಡ್ ನೌಕೆಗೆ ಸ್ಥಳಾಂತರಿಸಲಾಯಿತು. ಬಳಿಕ ಈತನನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಈತನ ಜತೆ ಮೂವರನ್ನು ನವಮಂಗಳೂರು ಬಂದರಿಗೆ ಕರೆತರಲಾಗಿದೆ. ಉಳಿದವರು ಬೋಟ್‌ನಲ್ಲೇ ಉಳಿದಿದ್ದು, ಸುರಕ್ಷಿತವಾಗಿದ್ದಾರೆಂದು ಕೋಸ್ಟ್‌ಗಾರ್ಡ್ ಮೂಲಗಳು ತಿಳಿಸಿವೆ.

error: Content is protected !!