ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ : ವಿಜೇತರಿಗೆ ಬಹುಮಾನ ವಿತರಣೆ

January 11, 2021

ಮಡಿಕೇರಿ ಜ. 11 : ಇಂದಿನ ಸ್ಫರ್ದಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ಕೊಡಗು ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರಪೇಟೆ ಪಟ್ಟಣದ ಪತ್ರಿಕಾ ಭವನದಲ್ಲಿ ಅಭಕಾಸ್ ಶಾಲೆಯಿಂದ ರಾಷ್ಟ್ರ ಮಟ್ಟದ ಆನ್ಲೈನ್ ಅಭಕಾಸ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇಂದು ಶಿಕ್ಷಣವೆನ್ನುವುದು ಅತ್ಯಂತ ಸ್ಫರ್ದಾತ್ಮಕ ಹಾಗೂ ದುಬಾರಿಯಾಗಿದೆ. ಆದರೂ ಯಾವುದೇ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಿಂಜರಿಯುವುದಿಲ್ಲಾ ಎಂದರು.
ಶಿಕ್ಷಣದೊಂದಿಗೆ ಮಕ್ಕಳಿಗೆ ಪ್ರೋತ್ಸಾಹವೂಬೇಕು. ಅಭಕಾಸ್ ಶಿಕ್ಷಣದಿಂದ ಮಕ್ಕಳ ಬುದ್ಧಿ ಮಟ್ಟ ಹೆಚ್ಚುವುದರಿಂದ ವಿಜ್ಞಾನ ಹಾಗೂ ಗಣಿತ ವಿಷಯಕ್ಕೆ ಸಹಕಾರಿಯಾಗಲಿದೆ ಎಂದರು.
ಸಂಸ್ಥೆಯ ಮುಖ್ಯಸ್ಥೆ ಸುಕನ್ಯಾ ಹೆಗ್ಡೆ ಮಾತನಾಡಿ, ಚೆನ್ನೈನ ಅಭಕಾಸ್ ಸಂಸ್ಥೆಯು ಆನ್ಲೈನ್ ಮೂಲಕ ನಡೆಸಿದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಹದಿನಾರು ವಿದ್ಯಾರ್ಥಿಗಳು ಸ್ಪರ್ದಿಸಿ ಬಹುಮಾನ ಗಳಿಸಿದ್ದಾರೆ. ಅವರಲ್ಲಿ ಕೆಲವು ವಿದ್ಯಾರ್ಥಿಗಳು ಹತ್ತು ನಿಮಿಷದಲ್ಲಿ ನೂರೈವತ್ತು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ತಮ್ಮ ಸಾಮಥ್ರ್ಯ ತೋರಿದ್ದಾರೆ ಎಂದರು.
ಅಬಕಾಸ್ ಶಿಕ್ಷಣ ಪಡೆಯುವುದರಿಂದ ಮಕ್ಕಳಲ್ಲಿ ಏಕಾಗ್ರತೆ, ನಿಖರತೆ, ವೇಗ, ಕಲ್ಪನಾಶಕ್ತಿಯೊಂದಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.
ಪ.ಪಂ. ಅಧ್ಯಕ್ಷೆ ನಳಿನಿಗಣೇಶ್ ಮಾತನಾಡಿ, ಸೋಮವಾರಪೇಟೆಯಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಅಬಕಾಸ್ ಶಾಲೆ ನಡೆಸುತ್ತಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಬಹುಮಾನ ಪಡೆದಿರುವುದು ನಮ್ಮ ಊರಿಗೆ, ಜಿಲ್ಲೆಗೆ ಹೆಮ್ಮೆ ಎಂದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಎಸ್.ಮಹೇಶ್ ಉಪಸ್ಥಿತರಿದ್ದರು.

error: Content is protected !!