ಕೊಡವ ಮುಸ್ಲಿಂ ಅಸೋಸಿಯೇಷನ್ ನಿಂದ ಪ್ರಸಕ್ತ ಸಾಲಿನ ಕ್ಯಾಲೆಂಡರ್ ಬಿಡುಗಡೆ

January 11, 2021

ಪೊನ್ನಂಪೇಟೆ, ಜ. 11 : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಉದ್ಯಮಿ ಅಕ್ಕಳತಂಡ ಎಸ್.ಮೊಯ್ದು ಅವರ ಪ್ರಾಯೋಜಕತ್ವದಲ್ಲಿ ಹೊರತರಲಾದ ಪ್ರಸಕ್ತ ಸಾಲಿನ ಕ್ಯಾಲೆಂಡರ್ (ದಿನದರ್ಶಿ) ಅನ್ನು ಬಿಡುಗಡೆಗೊಳಿಸಲಾಯಿತು.

ವಿರಾಜಪೇಟೆಯಲ್ಲಿರುವ ಕೆ. ಎಂ. ಎ. ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು ಜಿಲ್ಲೆಯ ಹಿರಿಯ ಧಾರ್ಮಿಕ ವಿದ್ವಾಂಸರೂ ಆಗಿರುವ ಸಂಸ್ಥೆಯ ಹಿರಿಯ ಸಲಹೆಗಾರ ಅಬುಸೈಯದ್ ಪಾಯಡತಂಡ ಎಂ. ಹುಸೈನ್ ಮುಸ್ಲಿಯಾರ್ ಅವರಿಗೆ ನೂತನ ಕ್ಯಾಲೆಂಡರ್ ನ ಪ್ರತಿಯನ್ನು ನೀಡುವುದರ ಮೂಲಕ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು, ಸಂಸ್ಥೆಯ ವತಿಯಿಂದ ಕಳೆದ 4 ವರ್ಷಗಳಿಂದ ಹೊರತರಲಾಗುತ್ತಿರುವ ಕ್ಯಾಲೆಂಡರ್ ಹೆಚ್ಚು ಉಪಯುಕ್ತವಾಗುತ್ತಿದೆ. ಇದನ್ನು ನಿರಂತರವಾಗಿ ಪ್ರಾಯೋಜಿಸುತ್ತಿರುವ ಅಕ್ಕಳತಂಡ ಎಸ್.ಮೊಯ್ದು ಅವರ ಸಾಮಾಜಿಕ ಸೇವೆ ಶ್ಲಾಘನೀಯ ಎಂದರು.

ಪಾಯಡತಂಡ ಎಂ. ಹುಸೈನ್ ಮುಸ್ಲಿಯಾರ್ ಅವರು ಮಾತನಾಡಿ, ಸೇವೆ ಮಾಡಲು ಯಾವುದೇ ನಿರ್ದಿಷ್ಟ ಆಯಾಮಗಳಿಲ್ಲ. ನಿಸ್ವಾರ್ಥವಾಗಿ ಮಾಡುವ ಜನೋಪಯೋಗಿ ಸೇವೆ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಲಹೆಗಾರರು, ಕ್ಯಾಲೆಂಡರ್ ಪ್ರಾಯೋಜಕ ಅಕ್ಕಳತಂಡ ಎಸ್.ಮೊಯ್ದು, ನಿವೃತ್ತ ಉಪ ತಹಶೀಲ್ದಾರ್, ವಿರಾಜಪೇಟೆಯ ಚಿಮ್ಮಿಚೀರ ಅಬ್ದುಲ್ಲಾ ಹಾಜಿ, ವಿರಾಜಪೇಟೆ ತಾ.ಪಂ. ಮಾಜಿ ಸದಸ್ಯರಾದ ಗುಂಡಿಕೆರೆಯ ಕುವೇಂಡ ವೈ. ಆಲಿ, ಹೊದವಾಡದ ಹರಿಶ್ಚಂದ್ರ ಎ. ಹಂಸ, ಬೇಗೂರಿನ ಆಲೀರ ಅಹ್ಮದ್ ಹಾಜಿ, ಹಳ್ಳಿಗಟ್ಟಿನ ಚಿಮ್ಮಿಚೀರ ಕೆ. ಇಬ್ರಾಹಿಂ, ಚಾಮಿಯಾಲದ ಪುದಿಯತ್ತಂಡ ಹೆಚ್. ಸಂಶುದ್ದೀನ್, ಐಮಂಗಲದ ಪೊಯಕೆರ ಎಸ್. ಮೊಹಮ್ಮದ್ ರಫೀಕ್, ಕೊಟ್ಟೋಳಿಯ ಮಿತಲತಂಡ ಎಂ. ಇಸ್ಮಾಯಿಲ್, ಬೇಟೋಳಿಯ ಮಂಡೇಡ ಎ. ಮೊಯ್ದು, ಅಂಬಟ್ಟಿಯ ಕರತೋರೆ ಮುಸ್ತಫ, ಚಾಮಿಯಾಲದ ಪುಡಿಯಾಣೆರ ಹನೀಫ್, ಸದಸ್ಯರಾದ ದುದ್ದಿಯಂಡ ಹೆಚ್. ಮೊಯ್ದು, ಕುಂಡಂಡ ಹನೀಫ್ ಮದನಿ ಉಸ್ತಾದ್, ಕನ್ನಡಿಯಂಡ ಹಸೈನಾರ್ ಮೊದಲಾದವರು ಪಾಲ್ಗೊಂಡಿದ್ದರು. ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!