‘ಸಾಹೇಬ್ರು ಬಂದವೇ!!’ ಅರೆಭಾಷೆ ನಾಟಕ ಪ್ರದರ್ಶನ : ಅರೆಭಾಷೆಯಲ್ಲಿ ಚಲನಚಿತ್ರ ನಿರ್ಮಾಣವಾಗಲಿ : ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸಲಹೆ

January 11, 2021

ಮಡಿಕೇರಿ ಜ.11 : ಕನ್ನಡ ಉಪ ಭಾಷೆಗಳಲ್ಲಿ ಅರೆಭಾಷೆಯು ಒಂದಾಗಿದ್ದು, ಅರೆಭಾಷೆಯನ್ನು ಮತ್ತಷ್ಟು ಪ್ರಚುರ ಪಡಿಸುವ ನಿಟ್ಟಿನಲ್ಲಿ ಅರೆಭಾಷೆಯಲ್ಲಿ ಚಲನಚಿತ್ರ ನಿರ್ಮಾಣ ಮಾಡುವಂತಾಗಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಸಲಹೆ ಮಾಡಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ನಡೆದ ‘ಸಾಹೇಬ್ರು ಬಂದವೇ!!’ ಅರೆಭಾಷೆ ನಾಟಕ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಲನಚಿತ್ರ ನಿರ್ಮಾಣದಿಂದ ಅರೆಭಾಷೆ ಬೆಳವಣಿಗೆಗೆ ಸಹಕಾರಿಯಾಗಲಿದೆ. ಸರ್ಕಾರವು ಸಹ ಚಲನಚಿತ್ರ ನಿರ್ಮಾಣಕ್ಕೆ ಸಹಾಯಧನ ಕಲ್ಪಿಸಲಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಶಾಸಕರು ಹೇಳಿದರು.
ರಾಷ್ಟ್ರದಲ್ಲಿ ಹಲವು ಭಾಷೆಯನ್ನು ಮಾತನಾಡುತ್ತಾರೆ. ಆಯಾಯ ಪ್ರಾಂತೀಯ ಮಾತೃ ಭಾಷೆಗಳನ್ನು ಉಳಿಸಿಕೊಂಡು ಹೋಗುವಂತಾಗಲು ಅರೆಭಾಷೆಯಲ್ಲಿ ಹೊಸ ಹೊಸ ಆವಿಷ್ಕಾರಗಳು ಆಗಬೇಕು ಎಂದು ಎಂ.ಪಿ.ಅಪ್ಪಚ್ಚು ರಂಜನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಂತೀಯ ಭಾಷೆಯನ್ನು ನಾವು ಬಳಸುವುದರ ಜೊತೆಗೆ, ಇತರರಿಗೂ ಕಲಿಯುವಂತೆ ಪ್ರೇರೇಪಣೆ ನೀಡಬೇಕು. ಆ ನಿಟ್ಟಿನಲ್ಲಿ ಭಾಷೆ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಅರೆಭಾಷೆ ನಾಟಕವು ಅರೆಭಾಷೆ, ಸಾಹಿತ್ಯ ಸಂಸ್ಕøತಿ, ಆಚಾರ ವಿಚಾರ ಕಲೆಗಳನ್ನು ಉಳಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅರೆಭಾಷೆಯಲ್ಲಿ ನಾಟಕ ಪ್ರದರ್ಶನ ಮಾಡುವ ಮೂಲಕ ಭಾಷಾ ಬೆಳವಣಿಗೆಗೆ ಪ್ರಯತ್ನಿಸಿರುವುದು ಶ್ಲಾಘನೀಯ ಎಂದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಾತನಾಡಿ ಪ್ರತಿಯೊಬ್ಬರೂ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅರೆಭಾಷೆಯನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಅರೆಭಾಷೆಯಲ್ಲಿ ಭಾನುವಾರಕ್ಕೆ ಐತ್ವಾರ ಎನ್ನುತ್ತಾರೆ. ಅದೇ ರೀತಿ ಸೋಮವಾರ, ಮಂಗಳವಾರ ಯಾವ ಪದ ಬಳಸುತ್ತಾರೆ ಎಂಬುದನ್ನು ತಿಳಿಸುವಂತಾಗಬೇಕು ಎಂದು ಅವರು ಹೇಳಿದರು.
ಆಕಾಶವಾಣಿ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಅವರು ಮಾತನಾಡಿ ಅರೆಭಾಷೆ ಬೆಳವಣಿಗೆಗೆ ಗಮಕ, ಸಂಗೀತ, ಯಕ್ಷಗಾನ, ತಾಳಮದ್ದಳೆ, ನಾಟಕ, ಮತ್ತಿತರ ಲಲಿತಾ ಕಲಾ ಪ್ರಕಾರಗಳು ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.
ಲಲಿತಾ ಕಲೆಗಳ ಮೂಲಕ ಭಾಷೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಸಾಧ್ಯ. ಆ ನಿಟ್ಟಿನಲ್ಲಿ ಸಾಹಿತ್ಯ ಮತ್ತು ಲಲಿತ ಕಲೆಗಳು ಒಂದಕ್ಕೊಂದು ಕೊಂಡಿಯಾಗಿ ಅರೆಭಾಷೆ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಸಾಹೇಬ್ರು ಬಂದವೇ ನಾಟಕ ನಿರ್ದೇಶಕರಾದ ಜೀವನ್‍ರಾಂ ಸುಳ್ಯ ಅವರು ಮಾತನಾಡಿ ಅರೆಭಾಷೆಯನ್ನು ಸುಳ್ಯ ತಾಲ್ಲೂಕಿನಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಎಲ್ಲರೂ ಮಾತನಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅರೆಭಾಷೆಯನ್ನು ನಾಟಕ ಹಾಗೂ ರಂಗ ಮಾಧ್ಯಮದ ಮೂಲಕ ತಲುಪಿಸಲು ಪ್ರಯತ್ನಿಸಲಾಗುತ್ತಿದೆ. ರಂಗಭೂಮಿಯಲ್ಲಿ ಚಲನಶೀಲತೆ ಕಾಣಬಹುದಾಗಿದೆ. ಎಲ್ಲಾ ಉಪ ಭಾಷೆಗಳಿಗೂ ಕನ್ನಡವೇ ಮೂಲ ಭಾಷೆಯಾಗಿದೆ. ಪ್ರತಿಯೊಂದು ಭಾಷೆಗೂ ಮೂಲ ಕನ್ನಡ ಭಾಷೆ ಎಂಬುದನ್ನು ಮರೆಯುವಂತಿಲ್ಲ ಎಂದರು. ಅರೆಭಾಷೆ ಗಡಿಯನ್ನು ಮೀರಿ ಬೆಳೆಯುತ್ತಿದೆ. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಹೊಸೂರು ರಮೇಶ್ ಜೋಯಪ್ಪ ಅವರು ಮಾತನಾಡಿ ಭಾಷೆಯನ್ನು ಉಳಿಸಿಕೊಂಡು ಹೋದಲ್ಲಿ ಮಾತ್ರ ಸಂಸ್ಕøತಿ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಅಕಾಡೆಮಿಯಿಂದ ನಡೆಯುವ ಕಾರ್ಯಕ್ರಮಗಳು ದಾಖಲೀಕರಣವಾಗುವಂತಾಗಬೇಕು ಎಂದು ಸಲಹೆ ಮಾಡಿದರು.
ಸಂತ ಜೋಸೆಫರ ಶಾಲೆಯ ಸಂಚಾಲಕರಾದ ಸಿಸ್ಟರ್ ಆಂಥೋನಿಯಮ್ಮ ಅವರು ಮಾತನಾಡಿ ಭಾಷೆ ಕಲಿಯುವುದರಿಂದ ಹೆಚ್ಚಿನ ಜ್ಞಾನವನ್ನು ಸಂಪಾದಿಸಬಹುದು. ಆ ನಿಟ್ಟಿನಲ್ಲಿ ಅರೆಭಾಷೆಯನ್ನು ಕಲಿಯುವಂತಾಗಬೇಕು ಎಂದು ಅವರು ಹೇಳಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಕೋರನ ವಿಶ್ವನಾಥ್ ಅವರು ಮಾತನಾಡಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪಾರ್ವತಿ ಅಪ್ಪಯ್ಯ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಲೋಕೇಶ್ ಸಾಗರ್, ಇತರರು ಇದ್ದರು. ರಿಜಿಸ್ಟ್ರಾರ್ ಚಿನ್ನಸ್ವಾಮಿ ಸ್ವಾಗತಿಸಿದರು. ಕೆ.ಸಿ.ದಯಾನಂದ ನಿರೂಪಿಸಿದರು, ಮನುಜ ನೇಹಿಗ ಪ್ರಾರ್ಥಿಸಿದರು. ಸದಸ್ಯರಾದ ಧನಂಜಯ ಅಗೋಳಿಕಜೆ ವಂದಿಸಿದರು.

‘ಸಾಹೇಬ್ರು ಬಂದವೇ!!’ ಏನಿದು ಆಶ್ಚರ್ಯವಾಗಿದೆಯಲ್ಲ ಅರೆಭಾಷೆಯಲ್ಲಿ ಎಂದು ನಾಟಕಕ್ಕೆ ತೆರಳಿದರೆ ಯಾರಿಗೂ ನಿರಾಶೆಯಂತೂ ಆಗುವುದಿಲ್ಲ. ನಾಟಕ ಆರಂಭದಿಂದ ನಗುವಿನಂದಲೇ ಕೂಡಿದೆ. ನಾಟಕದ ಅಂತ್ಯದಲ್ಲಿ ಎಲ್ಲರ ಮನಸ್ಸನ್ನು ಸ್ತಬ್ಧ ಗೊಳಿಸುತ್ತದೆ. ನಾಟಕವು ಎಲ್ಲೂ ಬೇಸರವಾಗದೆ ನೋಡುಗರನ್ನು ಕೇಂದ್ರೀಕರಿಸುವುದಂತು ದಿಟ. ಆ ದಿಸೆಯಲ್ಲಿ ಪ್ರತಿಯೊಬ್ಬ ಪಾತ್ರಧಾರಿಯು ಜೀವ ತುಂಬಿರುವುದು ಮನ ಸೆಳೆಯುತ್ತದೆ.
ಯಾವುದೇ ವ್ಯವಸ್ಥೆಯಲ್ಲಿ ತಿಳಿದೋ, ತಿಳಿಯದೋ ಒಂದಲ್ಲ ಒಂದು ರೀತಿಯಲ್ಲಿ ಮೋಸ ಹೋಗುತ್ತೇವೆ. ಅದೇ ರೀತಿ ಒಂದು ಸಂಸ್ಥೆಯಲ್ಲಿ ಪ್ರತಿನಿಧಿಗಳು, ಆಡಳಿತ ವರ್ಗ ಇರುತ್ತದೆ. ಅದರಲ್ಲಿ ಪ್ರತಿನಿಧಿಗಳು ದೊಡ್ಡ ಅಧಿಕಾರಿಗಳನ್ನು ಮೆಚ್ಚಿಸಲು ಹಾತೊರೆಯುವುದು. ಅದೇ ರೀತಿ ದೊಡ್ಡ ಪ್ರತಿನಿಧಿಗಳನ್ನು ಅಧಿಕಾರಿಗಳು ಮೆಚ್ಚಿಸಲು ಪ್ರಯತ್ನಿಸುವುದು ಸಾಮಾನ್ಯ. ಆದರೆ ಈ ನಾಟಕದಲ್ಲಿ ಮುಖ್ಯ ಪ್ರತಿನಿಧಿಯೇ ಡೆಲ್ಲಿ ಅಧಿಕಾರಿಯನ್ನು ಮೆಚ್ಚಿಸಲು ಏನು ಮಾಡುತ್ತಾರೆ. ಕೊನೆಗೆ ಹೇಗೆ ಪಶ್ಚಾತ್ತಾಪಕ್ಕೆ ತುತ್ತಾಗುತ್ತಾರೆ ಎಂಬುದು ನಾಟಕದ ತಿರುಳಾಗಿದೆ. ನಾಟಕದಲ್ಲಿ ಅಧಿಕಾರಿಯನ್ನು ಮೆಚ್ಚಿಸಲು ತಾ.. ಮುಂದು ನಾ… ಮುಂದು ಎಂದು ಹಾತೊರೆಯುತ್ತಾರೆ. ಆದರೆ ಅವರು ಅಧಿಕಾರಿಯೇ ಆಗಿರುವುದಿಲ್ಲ ಎಂಬುದನ್ನು ಕೇಳಿ ಎಲ್ಲರೂ ತಲೆಯ ಮೇಲೆ ಕೈ ಇಡುವಂತೆ ಮಾಡಿಕೊಳ್ಳುತ್ತಾರೆ. ಒಟ್ಟಾರೆ ಯಾರೂ ಸಹ ಮೋಸ, ವಂಚನೆಗೆ ಒಳಗಾಗಬಾರದು. ‘ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು’ ಎಂಬುದು ನಾಟಕದ ಸಾರಂಶವಾಗಿದೆ. ಇದನ್ನು ಅರೆಭಾಷೆಯಲ್ಲಿ ತಂದಿರುವುದು ಅದ್ಭುತವೇ ಸರಿ. ಭಾಷೆಯ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಪೂರಕ ಎಂಬುದನ್ನು ಒತ್ತಿ ಹೇಳುವಂತಿತ್ತು.

error: Content is protected !!