ಆನೆಕಾಡಿನಲ್ಲಿ ಚಿತ್ರ ನಿರ್ಮಾಪಕರಿಂದ ಹಲ್ಲೆ : ದಲಿತ ಹಿತರಕ್ಷಣಾ ಸಮಿತಿ ಆರೋಪ

January 11, 2021

ಮಡಿಕೇರಿ ಜ.11 : ಕುಶಾಲನಗರ ಸಮೀಪ ಆನೆಕಾಡು ಅರಣ್ಯ ಭಾಗದಲ್ಲಿ ನಡೆಯುತ್ತಿರುವ ಚಲನಚಿತ್ರದ ಚಿತ್ರೀಕರಣವನ್ನು ವೀಕ್ಷಿಸಲೆಂದು ತೆರಳಿದ್ದಾಗ ಚಿತ್ರದ ನಿರ್ಮಾಪಕ ಹಾಗೂ ಬೌನ್ಸರ್‍ಗಳು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕೊಡಗು ಜಿಲ್ಲಾ ದಲಿತ ಹಿತರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಡಿ.ಅಣ್ಣಯ್ಯ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುತೂಹಲಕ್ಕಾಗಿ ಚಿತ್ರೀಕರಣ ವೀಕ್ಷಿಸುತ್ತಿದ್ದಾಗ ಏಕಾಏಕಿ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಹಲ್ಲೆಯಾಗಿದೆ. ಈ ಬಗ್ಗೆ ಕುಶಾಲನಗರ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದಾಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ನನ್ನನ್ನೇ ಅವಮಾನಿಸಿದ್ದಾರೆ ಎಂದು ಆರೋಪಿಸಿದರು.
ನಿರ್ಮಾಪಕ ಹಾಗೂ ಬೌನ್ಸರ್‍ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ನನ್ನನ್ನು ಅವಮಾನಿಸಿದ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು. ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ದಲಿತ ಸಂಘಟನೆಗಳ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಅಣ್ಣಯ್ಯ ಎಚ್ಚರಿಕೆ ನೀಡಿದರು.
ಚಿತ್ರೀಕರಣದಿಂದಾಗಿ ಆನೆಕಾಡು ಅರಣ್ಯ ಭಾಗ ಕಲುಷಿತಗೊಳ್ಳುತ್ತಿದ್ದು, ವನ್ಯಜೀವಿಗಳಿಗೆ ತೊಂದರೆಯಾಗಲಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಎಲ್.ಎಂ.ಗಣೇಶ್ ಹಾಗೂ ಪ್ರಮುಖರಾದ ನಾಗರಾಜು ಉಪಸ್ಥಿತರಿದ್ದರು.

error: Content is protected !!