ಮಡಿಕೇರಿಯಲ್ಲಿ ಜನಸೇವಕ್ ಸಮಾವೇಶ : ಗ್ರಾ.ಪಂ ಗಳು ಸ್ಥಳೀಯ ಸರ್ಕಾರಗಳಾಗಿ ಮಾರ್ಪಟ್ಟಿವೆ : ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯ

11/01/2021

ಮಡಿಕೇರಿ ಜ.11 : ಸರಕಾರ ಗ್ರಾಮೀಣ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪ್ರತೀ ಪಂಚಾಯತ್‍ಗೆ ತಲಾ ಒಂದು ಕೋಟಿ ರೂ.ಗಳಷ್ಟು ಅನುದಾನವನ್ನು ನೀಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿ ಗ್ರಾ.ಪಂ ಗಳನ್ನು ಸ್ಥಳೀಯ ಸರಕಾರವನ್ನಾಗಿ ಮಾರ್ಪಡಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಜನಸೇವಕ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯವನ್ನು ಆಳಿದ ಕಾಂಗ್ರೆಸ್ ಇಷ್ಟು ವರ್ಷಗಳಲ್ಲಿ ಗ್ರಾಮ ಪಂಚಾಯತ್‍ಗಳಿಗೆ ಹಾಗೂ ಸದಸ್ಯರಿಗೆ ಮೌಲ್ಯವೇ ಇಲ್ಲದಂತೆ ಮಾಡಿತ್ತು ಎಂದು ಟೀಕಿಸಿದರು.
ಗ್ರಾಮ ಪಂಚಾಯತ್‍ಗೆ ಆಯ್ಕೆಯಾದ ಸದಸ್ಯರು ಗ್ರಾಮೀಣ ಜನರ ಭಾವನೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದರೊಂದಿಗೆ ಗ್ರಾಮ ಪಂಚಾಯತ್‍ಗಳನ್ನು ಮಾದರಿ ಗ್ರಾಮ ಪಂಚಾಯತ್‍ಗಳನ್ನಾಗಿ ಮಾಡಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಜನರ ಕೆಲಸಗಳನ್ನು ಮಾಡಿಕೊಡಲು ಪಂಚಾಯತ್‍ಗಳಲ್ಲಿ ವಿದ್ಯುತ್ ಸಮಸ್ಯೆ ಅಡ್ಡಯಾಗುತ್ತಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯದ ಎಲ್ಲಾ ಪಂಚಾಯತ್‍ಗಳಿಗೆ ಸೋಲಾರ್ ಅಳವಡಿಸಲು 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ ಅವರು, ಸ್ವಚ್ಛಭಾರತ್ ಯೋಜನೆಯಡಿ ಪ್ರತೀ ಪಂಚಾಯತ್‍ಗಳಿಗೆ ತಲಾ 20 ಲಕ್ಷ ರೂ.ಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡುತ್ತಿದೆ.ಆದರೆ 6ಸಾವಿರ ಗ್ರಾಮ ಪಂಚಾಯತ್‍ಗಳ ಪೈಕಿ ಕೇವಲ 1500 ಗ್ರಾ.ಪಂ.ಗಳು ಮಾತ್ರ ಈ ಯೋಜನೆಯ ಸದುಪಯೋಗಪಡೆದುಕೊಂಡಿದ್ದು, ಉಳಿದ 4500ಪಂಚಾಯತ್‍ಗಳಿಗೆ ಇದು ಸಾಧ್ಯವಾಗಿಲ್ಲವೇಕೆ ಎಂದು ಪ್ರಶ್ನಿಸಿದರು.
ಜನಪ್ರತಿನಿಧಿಗಳಾಗಿ ಆಯ್ಕೆಯಾದ ಗ್ರಾ.ಪಂ.ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಸಮಗ್ರವಾದ ಯೋಜನೆಯನ್ನು ರೂಪಿಸಿಕೊಂಡು ಮುಂದಿನ ಐದು ವರ್ಷಗಳಲ್ಲಿ ಪಂಚಾಯತ್‍ಗಳನ್ನು ಮಾದರಿ ಪಂಚಾಯತ್‍ಗಳನ್ನಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದ ಅವರು, ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರನ್ನು ಆಯ್ಕೆ ಮಾಡಿದ ಜನರೇ ಗ್ರಾ.ಪಂ.ಸದಸ್ಯರನ್ನೂ ಆಯ್ಕೆ ಮಾಡಿರುವುದರಿಂದ ತಾವುಗಳು ಗ್ರಾ.ಪಂ.ಗಳನ್ನು ಸ್ಥಳೀಯ ಸರಕಾರಗಳನ್ನಾಗಿ ರೂಪಿಸಬೇಕು ಎಂದು ಸಲಹೆ ಮಾಡಿದರು. ಬಿಜೆಪಿ ನುಡಿದಂತೆ ನಡೆಯುವ ಪಕ್ಷವಾಗಿದ್ದು, ಯಾವುದೇ ಕಾರಣಕ್ಕೂ ಮತದಾರರಿಗೆ ಸುಳ್ಳು ಭವರವಸೆಗಳನ್ನು ನೀಡದಿರಿ ಎಂದು ಹೇಳಿದ ಅವರು, ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಅನುದಾನವನ್ನು ಬಳಸಿಕೊಂಡು ಮಾಡಬಹುದಾದ ಅಭಿವೃದ್ಧಿ ಕೆಲಸಗಳನ್ನು ಮಾತ್ರ ಮಾಡಿಕೊಡುವ ಭರವಸೆ ನೀಡಬೇಕೆಂದು ಕಿವಿಮಾತು ಹೇಳಿದರು.
ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳನ್ನು ಶೇ.100ರಷ್ಟು ಗೆಲ್ಲಿಸುವ ಹೊಣೆಗಾರಿಗೆ ಗ್ರಾ.ಪಂ. ಸದಸ್ಯರ ಮೇಲಿದ್ದು, ಸದಸ್ಯರು ಪಕ್ಷ ಮತ್ತು ಕಾರ್ಯಕರ್ತರ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸಬೇಕು ಎಂದು ಈಶ್ವರಪ್ಪ ನುಡಿದರು.
ಬಿಜೆಪಿ ಸ್ಥಾಪನೆಯಾದಾಗ ಪಕ್ಷಕ್ಕೆ ಯಾವುದೇ ಅಧಿಕಾರವಿರಲಿಲ್ಲ. ಆದರೆ ರಾಮಮಂದಿರ ನಿರ್ಮಾಣ, ಆರ್ಟಿಕಲ್ 370ರ ರದ್ದತಿ, ಗೋಹತ್ಯೆ ನಿಷೇಧ ಮುಂತಾದ ವಿಷಯಗಳ ಬಗ್ಗೆ ಅಂದೇ ಪಕ್ಷ ತನ್ನ ಅಜೆಂಡಾವನ್ನಾಗಿಸಿತ್ತು. ಆದರೆ ವಿರೋಧಪಕ್ಷಗಳು ಇವೆಲ್ಲವೂ ರಾಜಕೀಯಕ್ಕಾಗಿ ನೀಡುವ ಭರವಸೆಗಳೆಂದು ಲೇವಡಿ ಮಾಡಿದ್ದವು. ಆದರೆ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ತಾನು ಹೇಳಿದಂತೆ ನಡೆದುಕೊಳ್ಳುತ್ತಿದೆ. ಇದರಿಂದಾಗಿಯೇ ಇಂದು ಗ್ರಾಮ ಮಟ್ಟದದಿಂದ ಲೋಕಸಭೆಯವರೆಗೂ ಮತದಾರರು ಆಶೀರ್ವಾದ ಮಾಡುತ್ತಿದ್ದಾರೆ. ಜನರ ಈ ಪ್ರೀತಿ, ವಿಶ್ವಾಸವನ್ನು ಉಳಿಸುವ ಕೆಲಸವನ್ನು ಪಕ್ಷದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮಾಡಬೇಕು ಎಂದು ಹೇಳಿದರು.