ಹೊದವಾಡದಲ್ಲಿ ಕೇರಳದ ವ್ಯಕ್ತಿಗಳಿಂದ ಭೂಅಕ್ರಮ : ದಾಮೋದರ್ ಆಚಾರಿ ಆರೋಪ

January 12, 2021

ಮಡಿಕೇರಿ ಜ.12 : ಹೊದವಾಡ ಗ್ರಾಮದ ಸರ್ವೆ ನಂ. 213/1 ರಲ್ಲಿ ಇರುವ ಪಿತ್ರಾರ್ಜಿತ ಆಸ್ತಿ 12 ಎಕರೆ ಜಾಗವನ್ನು ಕೇರಳ ಮೂಲದ ವ್ಯಕ್ತಿಗಳು ಅಕ್ರಮವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೊದವಾಡ ಗ್ರಾಮದ ದಾಮೋದರ್ ಆಚಾರಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊದವಾಡ ಗ್ರಾಮದಲ್ಲಿ ಇರುವ ನನ್ನ ಪಿತ್ರಾರ್ಜಿತ ಆಸ್ತಿ ನನ್ನ ಅಜ್ಜ ಮತ್ತು ತಂದೆಯ ಮೂಲಕ ನನ್ನ ಸ್ವಾಧೀನಕ್ಕೆ ಬಂದಿದೆ. ಈ ಜಾಗವನ್ನು ನಾನು ಯಾರಿಗೂ ಮಾರಾಟ ಮಾಡಿಲ್ಲ. ಹೀಗಿದ್ದೂ ವಿರಾಜಪೇಟೆ ತಾಲ್ಲೂಕಿನ ಚಿಕ್ಕಪೇಟೆ ಬೋಯಿಕೇರಿಯ ತಂದೆ ಮತ್ತು ಮಗ ಸೇರಿದಂತೆ ಇಬ್ಬರು ವ್ಯಕ್ತಿಗಳು ನನಗೆ ಸೇರಿದ ಜಾಗವನ್ನು ಅಕ್ರಮವಾಗಿ ಅವರ ಹೆಸರಿಗೆ ದುರಸ್ತಿ ಮಾಡಿಸಿಕೊಳ್ಳಲು ಪ್ರಯತ್ನಿಸಿದ್ದರು. ಈ ಬಗ್ಗೆ ತಾನು ಅಗತ್ಯ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಸದರಿ ದುರಸ್ತಿ ಕಾರ್ಯ ಭೂ ದಾಖಲೆಗಳ ಉಪನಿರ್ದೇಶಕರ ಆದೇಶದಂತೆ ರದ್ದಾಗಿರುವುದಾಗಿ ತಿಳಿಸಿದರು.
ಸದರಿ ಜಾಗದ ಜಮಾಬಂದಿ ಮತ್ತು ಆರ್‍ಟಿಸಿಯಲ್ಲಿ ಅಜ್ಜ ಪೆರುಮಾಳ್ ಹೆಸರು ಇರುವುದಾಗಿ ತಿಳಿಸಿದ ದಾಮೋದರ್, ನನ್ನ ಅಜ್ಜ ಮತ್ತು ತಂದೆಯ ಜೀವಿತಾವಧಿಯಲ್ಲಿ ಅವರು ಕೃಷಿ ಮಾಡಿಕೊಂಡಿದ್ದರು. ಇದೀಗ ತಾನು ಕಾಫಿ ಕೃಷಿ ಮಾಡಿಕೊಂಡಿದ್ದೇನೆ. ಇದೀಗ ಹಠಾತ್ತನೆ ನನಗೆ ಸೇರಿದ 12 ಎಕರೆ ಜಾಗವನ್ನು ಅಕ್ರಮವಾಗಿ ಹೊಂದಿಕೊಳ್ಳುವ ಪ್ರಯತ್ನ ಕೆಲವರಿಂದ ನಡೆಯುತ್ತಿರುವುದಾಗಿ ತೀವ್ರ ಕಳವಳ ವ್ಯಕ್ತಪಡಿಸಿದರು.
ಕಳೆದ ಸಾಲಿನ ಡಿ.6 ರಂದು ನಮ್ಮ ಜಾಗವನ್ನು ಅಕ್ರಮವಾಗಿ ಪಡೆಯಲು ಪ್ರಯತ್ನಿಸುತ್ತಿರುವ ಮಂದಿ ಗೂಂಡಾಗಳನ್ನು ಬಿಟ್ಟು ತೋಟದ ಸುತ್ತ ಇದ್ದ ಬೇಲಿಯನ್ನು ಕಿತ್ತು ಹಾಕಿರುವುದಲ್ಲದೆ ಮನೆಗೆ ನುಗ್ಗಿ ಮನೆಯಲ್ಲಿದ್ದ ಮಹಿಳೆಯರನ್ನು ಎಳೆದು ದೌರ್ಜನ್ಯವೆಸಗಿರುವುದಾಗಿ ಆರೋಪಿಸಿದರು.
ಈ ಬಗ್ಗೆ ನಾನು ನಾಪೆÇೀಕ್ಲು ಪೆÇೀಲಿಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೊಲೀಸರು ದೂರನ್ನು ಸ್ವೀಕರಿಸಿಲ್ಲ. ಬದಲಾಗಿ, ಜಾಗವನ್ನು ಅಕ್ರಮವಾಗಿ ಪಡೆಯಲು ಮುಂದಾದವರು ನೀಡಿದ ಸುಳ್ಳು ಪ್ರಕರಣವನ್ನು ತನ್ನ ವಿರುದ್ಧ ದಾಖಲಿಸಿದ್ದಾರೆ. ಕಂದಾಯ ಅಧಿಕಾರಿಗಳು, ಕೆಲ ಪೊಲೀಸ್ ಅಧಿಕಾರಿಗಳು, ಅಕ್ರಮವಾಗಿ ಜಾಗ ಪಡೆಯಲು ಪ್ರಯತ್ನಿಸುತ್ತಿರುವವರ ಪರವಾಗಿದ್ದಾರೆ. ಇದೀಗ ನನಗೆ ಜೀವ ಬೆದರಿಕೆ ಇದ್ದು, ಸೂಕ್ತ ರಕ್ಷಣೆ ಒದಗಿಸಬೇಕೆಂದು ಮನವಿ ಮಾಡಿ, ಒಂದೊಮ್ಮೆ ನನ್ನ ಮತ್ತು ನನ್ನ ಕುಟುಂಬದವರ ಜೀವಕ್ಕೆ ಹಾನಿಯಾದಲ್ಲಿ ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳು, ಅಧಿಕಾರಿಗಳು ಹೊಣೆಯಾಗುತ್ತಾರೆಂದು ತಿಳಿಸಿದರು.
ತಾನು ಕಷ್ಟಪಟ್ಟು ಮಾಡಿರುವ ತೋಟವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸಿದಲ್ಲಿ, ಅಂತಹವರ ವಿರುದ್ಧ ನ್ಯಾಯಾಲಯದಲ್ಲಿ ದೂರು ನೀಡಲಾಗುವುದೆಂದು ದಾಮೋದರ ಆಚಾರಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ದಾಮೋದರ ಆಚಾರಿಯವರ ಸಂಬಂಧಿಗಳಾದ ಎ.ಆರ್. ಕಮಲಾಕ್ಷ, ಎ.ವಿ. ಗಣೇಶ್, ಕೆ.ಎಸ್. ರೇಷ್ಮ ಉಪಸ್ಥಿತರಿದ್ದರು.

error: Content is protected !!