ಕಸಮುಕ್ತ ಗ್ರಾಮವನ್ನಾಗಿಸಲು ನಲ್ಲೂರು ಗ್ರಾಮಸ್ಥರ ಪಣ : 88 ಕುಟುಂಬಗಳಿಂದ ಸ್ವಚ್ಛತಾ ಶ್ರಮದಾನ

January 12, 2021

ಮಡಿಕೇರಿ ಜ.12 : ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮವನ್ನು ಸಂಪೂರ್ಣ ಸ್ವಚ್ಛಗ್ರಾಮವನ್ನಾಗಿಸಲು ಸುಮಾರು 88 ಕುಟುಂಬಗಳು ಕೈಜೋಡಿಸಿದ್ದು, ಸೋಮವಾರ ದಿನ ಗ್ರಾಮಸ್ಥರು ಸಂಘಟಿತರಾಗಿ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ನಲ್ಲೂರುವಿನ ಶ್ರೀ ಸರಸ್ವತಿ ಯುವಕ ಸಂಘ ಹಾಗೂ ವಿವಿಧ ಸ್ವ ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಲ್ಲೂರುವಿನ ವಿವಿಧ ಗಡಿ ಭಾಗಗಳಿಂದ ಸ್ವಚ್ಛತಾ ಕಾರ್ಯಕ್ರಮ ನೇರವೇರಿಸಲಾಯಿತು. ಒಂದು ಟಿಲ್ಲರ್ ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಒಂದು ಟ್ರ್ಯಾಕ್ಟರ್‍ನಲ್ಲಿ ಒಣ ಹಾಗೂ ಹಸಿಕಸ ಇತ್ಯಾದಿಗಳನ್ನು ಸಂಗ್ರಹಿಸಲಾಯಿತು.
ಶ್ರೀ ಸರಸ್ವತಿ ಯುವಕ ಸಂಘದ ಅಧ್ಯಕ್ಷ ತೀತರಮಾಡ ರಾಜ ಹಾಗೂ ಚೋಡುಮಾಡ ಜಗದೀಶ್ ನೇತ್ರತ್ವದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಶ್ರಮದಾನ ಜರುಗಿತು. ನಲ್ಲೂರನ್ನು ಪರಿಸರ ಸ್ನೇಹಿ ಗ್ರಾಮವಾಗಿಸುವದಲ್ಲದೆ, ಫ್ಲಾಸ್ಟಿಕ್ ಮುಕ್ತ ಗ್ರಾಮವಾಗಿಯೂ ಪರಿವರ್ತಿಸಲು ಮುಂದೆ ನಿರಂತರ ಕಾರ್ಯಕ್ರಮ ಹಾಕಿಕೊಳ್ಳಲಾಗುವುದೆಂದು ಸಮಾಜ ಸೇವಕ ಚೋಡುಮಾಡ ಜಗದೀಶ್ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಿ. ಸಂಜು ಬೋಪಣ್ಣ, ತೀತರಮಾಡ ಶಶಿ ಗಣಪತಿ, ತೀತರಮಾಡ ವಿಜಯ, ಪುಚ್ಚಿಮಾಡ ಮುತ್ತಪ್ಪ, ಪುಚ್ಚಿಮಾಡ ಪ್ರಾಣು ಗಣಪತಿ, ಮಲಚ್ಚೀರ ಅಶೋಕ್, ಮಲಚ್ಚೀರ ಗಿರೀಶ್, ರಜದೀಶ್, ಪುಳ್ಳಂಗಡ ಸುರೇಶ್ ಪೂಣಚ್ಚ, ಕೊಕ್ಕಲೆಮಾಡ ರಾಜ ಮಾಚಯ್ಯ, ಸುರೇಶ್, ವಿವೇಕ್,ಸುಜಯ್ ಬೋಪಯ್ಯ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.

error: Content is protected !!