ಕೆಎಚ್‍ಬಿಯಿಂದ ವಸತಿ ಯೋಜನೆ ನಿರ್ಮಾಣಕ್ಕೆ ಅನುಮೋದನೆ : ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ರಮೇಶ್ ಹೊಳ್ಳ

12/01/2021

ಮಡಿಕೇರಿ ಜ.12 : ತಾಲ್ಲೂಕಿನ ಕೆ.ನಿಡುಗಣೆ ಗ್ರಾಮ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ 94 ಎಕರೆ ವಿಸ್ತೀರ್ಣದ ಜಾಗದಲ್ಲಿ ವಸತಿ ಉದ್ದೇಶಕ್ಕೆ ಕರ್ನಾಟಕ ಗೃಹ ಮಂಡಳಿ ಕೋರಿರುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲು ಇತ್ತೀಚೆಗೆ ನಡೆದ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಅನುಮೋದನೆ ದೊರೆತಿದೆ ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಎಸ್.ರಮೇಶ್ ಹೊಳ್ಳ ಅವರು ತಿಳಿಸಿದ್ದಾರೆ.
ನಗರದ ಸುದರ್ಶನ ಅತಿಥಿ ಗೃಹದಲ್ಲಿ ಇತ್ತೀಚೆಗೆ ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ವಿಧಾನಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಅವರ ಉಪಸ್ಥಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಸತಿ ಉದ್ದೇಶ ವಿನ್ಯಾಸದ ನಕ್ಷೆಗೆ ಅನುಮೋದನೆ ನೀಡಲಾಗಿದೆ ಎಂದು ರಮೇಶ್ ಹೊಳ್ಳ ಅವರು ಹೇಳಿದ್ದಾರೆ.
94 ಎಕರೆ ಜಾಗದಲ್ಲಿ ಇಡಬ್ಲ್ಯುಎಸ್(439), ಎಲ್‍ಐಜಿ(211), ಎಂಐಜಿ(145), ಎಚ್‍ಐಜಿ-1(219), ಎಚ್‍ಐಜಿ-2(126) ಒಟ್ಟು 1,140 ನಿವೇಶನ ಒಳಗೊಂಡ ನಕಾಶೆ ತಯಾರು ಮಾಡಲಾಗಿದೆ. ಹೀಗೆ ವಿವಿಧ ಹಂತದ ನಿವೇಶನ ಒಳಗೊಂಡಿದ್ದು, ಕರ್ನಾಟಕ ಗೃಹ ಮಂಡಳಿಯು ನಿವೇಶನ ಅಭಿವೃದ್ಧಿ ಪಡಿಸಲು ಅನುಮೋದನೆ ನೀಡಲಾಗಿದೆ ಎಂದು ರಮೇಶ್ ಹೊಳ್ಳ ಅವರು ವಿವರಿಸಿದರು.
ಮಡಿಕೇರಿ ನಗರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗೃಹ ಮಂಡಳಿ ವತಿಯಿಂದ ವಸತಿ ಕಲ್ಪಿಸಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಮಡಿಕೇರಿ ನಗರಸಭೆ ಮತ್ತು ನಗರಾಭಿವೃದ್ಧಿ ಪಾಧಿಕಾರ ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಿರುವ ಗದ್ದಿಗೆ ಉದ್ಯಾನ ಅಭಿವೃದ್ಧಿಪಡಿಸಲು ರಾಜಾಸೀಟು ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿತ್ತು. ಆದರೆ ಉದ್ಯಾನವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದ ಕಾರಣ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದಲೇ ಗದ್ದಿಗೆ ಉದ್ಯಾನವನ ಅಭಿವೃದ್ಧಿ ಪಡಿಸುವುದು ಸೂಕ್ತವೆಂದು ಶಾಸಕರು ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಮಾತನಾಡಿ ನಗರದ ಡಿಎಆರ್ ಕ್ವಾಟ್ರಸ್ ಹಿಂಭಾಗದಲ್ಲಿನ ಕೆರೆಯ ಸುತ್ತಲೂ ಇರುವ ಸರ್ಕಾರಿ ಜಾಗದಲ್ಲಿ ಪ್ರಾಧಿಕಾರ ವತಿಯಿಂದ ಪಾತ್ ವೇ ಉದ್ಯಾನವನ್ನು ನಿರ್ಮಿಸಲು ಮುಂದಾಗುವಂತೆ ಅವರು ಸಲಹೆ ಮಾಡಿದರು.
ಚೇಂಬರ್ ಆಫ್ ಕಾಮರ್ಸ್‍ನ ಎಂ.ಬಿ.ದೇವಯ್ಯ ಅವರು ಮಾತನಾಡಿ ಮಡಿಕೇರಿ ನಗರದಲ್ಲಿ ವಾಹನ ನಿಲುಗಡೆಗೆ ತುಂಬಾ ತೊಂದರೆಯಾಗುತ್ತಿದ್ದು, ಯೋಗ್ಯ ಸ್ಥಳ ಗುರುತಿಸುವಂತಾಗಬೇಕು. ಆ ನಿಟ್ಟಿನಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲುಸೇತುವೆ ನಿರ್ಮಿಸುವಂತಾಗಬೇಕು. ಈಗಿರುವ ಮಂಗಳೂರು-ಮೂರ್ನಾಡು ರಸ್ತೆಯ ಪ್ರವಾಸಿ ಮಂದಿರವನ್ನು ತೆರವುಗೊಳಿಸಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ಸಲಹೆ ಮಾಡಿದರು.
ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ವಿಭಾಗದ ಪ್ರಾದೇಶಿಕ ಅಧಿಕಾರಿ ಅವರಿಗೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಡಿಕೇರಿ ನಗರದ ಅಭಿವೃದ್ಧಿ ಸಂಬಂಧ ಕೋಟೆ ಆವರಣದ ಸುತ್ತಲೂ ಇರುವ ಜಾಗದಲ್ಲಿ ನಗರಸಭೆ ವತಿಯಿಂದ ಪಾತ್ ವೇ ವ್ಯವಸ್ಥೆ ಮಾಡಬೇಕು ಎಂದು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ ಅವರು ಸಲಹೆ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಮಡಿಕೇರಿ ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಸಲಹೆ, ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಗೃಹ ಮಂಡಳಿ ಮೈಸೂರು ವಿಭಾಗದ ಕಾರ್ಯಪಾಲಕ ಅಭಿಯಂತರರು ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣೆ ಗ್ರಾಮದ 94 ಎಕರೆ ಜಾಗವನ್ನು ವಸತಿ ಉದ್ದೇಶದ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡಬೇಕಾಗಿ ಸಭೆಯಲ್ಲಿ ಕೋರಿದರು.
ಮಡಿಕೇರಿ ನಗರ ಯೋಜನಾ ಆಯುಕ್ತರಾದ ಎಲ್.ಲಾವಣ್ಯ, ಪೌರಾಯುಕ್ತರಾದ ಎಸ್.ವಿ.ರಾಮದಾಸ್, ಸಜೀತ್, ಕೆ.ಕೆ.ಜಯಂತಿ ಇತರರು ಇದ್ದರು.