ರಾಷ್ಟ್ರೀಯ ಯುವ ದಿನಾಚರಣೆ : ಸ್ವಾಮಿ ವಿವೇಕಾನಂದರ ತತ್ವಾದರ್ಶ ತಿಳಿದುಕೊಳ್ಳಿ: ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ಸಲಹೆ

January 12, 2021

ಮಡಿಕೇರಿ ಜ.12 : ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಸೋಮವಾರಪೇಟೆ, ವಿರಾಜಪೇಟೆ ತಾಲ್ಲೂಕು ಯುವ ಒಕ್ಕೂಟ, ಹಾಕತ್ತೂರು ಸರ್ಕಾರಿ ಪ್ರೌಢಶಾಲೆ ಹಾಗೂ ಹಾಕತ್ತೂರು ತೊಂಭತ್ತುಮನೆ ಮಾರ್ಗದರ್ಶಿ ತ್ರಿನೇತ್ರ ಯುವಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 158 ನೇ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಯುವ ಸಪ್ತಾಹ ಉದ್ಘಾಟನಾ ಸಮಾರಂಭವು ಮಂಗಳವಾರ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶ ಕಂಡ ಅಪ್ರತಿಮ ಹಾಗೂ ಆಧ್ಯಾತ್ಮಿಕರಲ್ಲಿ ಶ್ರೇಷ್ಠರಾದ ಸ್ವಾಮಿ ವಿವೇಕಾನಂದರ ಆದರ್ಶ ತತ್ವಗಳನ್ನು, ನಡೆ-ನುಡಿಗಳನ್ನು ವಿದ್ಯಾರ್ಥಿಗಳು ಪಾಲಿಸುವಂತಾಗಬೇಕು ಎಂದರು.
ಯುವಕರೇ ಈ ದೇಶದ ಶಕ್ತಿ ಎಂದು ವಿದ್ಯಾರ್ಥಿಗಳಿಗೆ ಮನವರಿಕೆಯ ಮಾತುಗಳನ್ನು ಹೇಳಿದರು. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಯಾವುದು ಸಹ ಅಸಾಧ್ಯವಾದದ್ದು ಇಲ್ಲ. ಆದ ಕಾರಣ ವಿದ್ಯಾರ್ಥಿಗಳು ಈ ದೇಶಕ್ಕೆ ಹೆಸರು ತರುವಂತಹ ಕೆಲಸಗಳನ್ನು ಮಾಡಬೇಕು ಎಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕರಾದ ಗುರುಸ್ವಾಮಿ ಅವರು ಮಾತನಾಡಿ ಯುವ ಜನರಲ್ಲಿ ಅಚಲವಾದ ಗುರಿ ಇರಬೇಕು. ಆ ನಿಟ್ಟಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು, ಇದರಿಂದ ಯುವ ಶಕ್ತಿಯು ದೇಶವನ್ನು ಉನ್ನತ ಮಟ್ಟದಲ್ಲಿ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದರು.
ಸ್ವಾಮಿ ವಿವೇಕಾನಂದರ ಧ್ಯೇಯ ವಾಕ್ಯವಾದ ಯುವಕರೆ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ತತ್ವಗಳನ್ನು ಅನುಸರಿಸಿ ಸಾಧನೆಯ ಗುರಿಮುಟ್ಟಿ ಎಂದು ವಿದ್ಯಾರ್ಥಿಗಳಿಗೆ ಗುರುಸ್ವಾಮಿ ಅವರು ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿರುವ ಯುವ ಸಂಘಗಳಿಗೆ ಪ್ರತೀ ವರ್ಷ ನವೀಕರಣಗೊಂಡರೆ ಅಂತಹ ಸಂಘಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಗ್ರಾಮೀಣ ಕ್ರೀಡಾ ಕೂಟಗಳಿಗೆ ಸಹಾಯಧನ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಒದಗಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಹಾಕತ್ತೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಭವಾನಿ ಶಂಕರ್ ಅವರು ಸ್ವಾಮಿ ವಿವೇಕಾನಂದರ ಬಗ್ಗೆ ಉಪನ್ಯಾಸ ಮಾಡಿದರು. 2019-20 ರಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಹಾಕತ್ತೂರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರೋತ್ಸಾಹಧನ ವಿತರಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹಾಕತ್ತೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಚಂದ್ರ, ಶಿಕ್ಷಕರಾದ ವನಜಾ, ಎಸ್‍ಡಿಎಂಸಿ ಅಧ್ಯಕ್ಷರಾಧ ಪಿ.ಎಸ್.ಸುನೀತ, ಪಿಡಿಒ ಪ್ರಕಾಶ್, ಹಾಗೂ ನೂತನವಾಗಿ ಆಯ್ಕೆಯಾಗಿರುವ ಹಾಕತ್ತೂರು ಮತ್ತು ಮೆಕೇರಿ ಗ್ರಾಮ ಪಂಚಾಯಿತಿಯ ಸದಸ್ಯರುಗಳು ಇತರರು ಇದ್ದರು.
ಜಿಲ್ಲಾ ಯುವ ಒಕ್ಕೂಟ ಹಾಗೂ ತ್ರಿನೇತ್ರ ಯುವಕ ಸಂಘದ ಅಧ್ಯಕ್ಷರಾದ ಪಿ.ಪಿ.ಸುಕುಮಾರ್ ಅವರು ಪ್ರಾಸ್ತಾವಿಕ ಮಾತನಾಡಿದರು. ತ್ರಿನೇತ್ರ ಯುವಕ ಸಂಘದ ಉಪಾಧ್ಯಕ್ಷರಾದ ಕೆ.ವೈ.ಜಲೀಲ್ ಅವರು ಸ್ವಾಗತಿಸಿದರು. ಬಿ.ಎಂ.ಜಯಂತಿ ಅವರು ವಂದಿಸಿದರು. ತ್ರಿನೇತ್ರ ಯುವಕ ಸಂಘದ ಕಾರ್ಯದರ್ಶಿ ಎಂ.ಎಂ.ಅಬುಬಕರ್ ಅವರು ನಿರೂಪಿಸಿದರು.

error: Content is protected !!