ಗೋಮಾಂಸ ರಫ್ತು ಮಾಡುವವರ ಮೇಲೆ ಗೋವಿನ ಶಾಪವಿದೆ : ಕೊಡಗು ಕಾಂಗ್ರೆಸ್ ತಿರುಗೇಟು

12/01/2021

ಮಡಿಕೇರಿ ಜ.12 : ಗೋಮಾಂಸವನ್ನು ರಫ್ತು ಮಾಡುವ ವ್ಯವಹಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವ ಬಿಜೆಪಿ ಮಂದಿಯ ಮೇಲೆ ಗೋವುಗಳ ಶಾಪವಿದೆಯೇ ಹೊರತು ನೇರ ನುಡಿಯ ನಾಯಕ ಸಿದ್ದರಾಮಯ್ಯ ಅವರ ಮೇಲಲ್ಲವೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ತಿರುಗೇಟು ನೀಡಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಪಕ್ಷದ ಜಿಲ್ಲಾ ವಕ್ತಾರ ಟಿ.ಈ.ಸುರೇಶ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಅವರು ಗೋವಿನ ವಿಚಾರದಲ್ಲಿ ಮಾಡಿರುವ ಟೀಕೆಯನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುವುದಾಗಿ ತಿಳಿಸಿದ್ದಾರೆ.
ಬಹುಮತ ಪಡೆದು ಸರ್ಕಾರ ರಚಿಸಿ ಜನಪರ ಕಾರ್ಯಕ್ರಮಗಳ ಮೂಲಕ ಐದು ವರ್ಷಗಳ ಕಾಲ ಪಾರದರ್ಶಕವಾಗಿ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರ ಮೇಲೆ ಯಾವುದೇ ಗೋವಿನ ಶಾಪವಿಲ್ಲ ಎನ್ನುವುದಕ್ಕೆ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಿರುವುದೇ ಸಾಕ್ಷಿಯಾಗಿದೆ. ಗೋವುಗಳು ಮತ್ತು ಹಿಂದುತ್ವದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಅಪಾರ ಗೌರವವಿದೆ. ಆದರೆ ಈ ಎರಡು ವಿಚಾರವನ್ನು ಭಾವನಾತ್ಮಕವಾಗಿ ಬಳಸಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳುವ ಬಿಜೆಪಿ ತನ್ನ ಪಕ್ಷದವರೇ ಗೋಮಾಂಸ ರಫ್ತು ವ್ಯವಹಾರದಲ್ಲಿ ತೊಡಗಿರುವುದನ್ನು ಮರೆ ಮಾಚುತ್ತಿದೆ ಎಂದು ಸುರೇಶ್ ಆರೋಪಿಸಿದ್ದಾರೆ.
ಹಿಂದುತ್ವ ಮತ್ತು ಗೋವಿನ ವಿಚಾರವನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದನ್ನು ವಿರೋಧಿಸಲಾಗಿದೆಯೇ ಹೊರತು ಎಲ್ಲಿಯೂ ಅಪಮಾನ ಮಾಡುವ ಪ್ರಯತ್ನ ಮಾಡಿಲ್ಲ. ಆದರೆ ಸಿದ್ದರಾಮಯ್ಯ ಅವರ ಮಾತುಗಳನ್ನು ತಪ್ಪಾಗಿ ಪ್ರತಿಬಿಂಬಿಸಿ ಕ್ಷುಲ್ಲಕ ರಾಜಕಾರಣ ಮಾಡಲಾಗುತ್ತಿದೆ. ಒಂದು ಕಡೆ ಗೋಪ್ರೇಮದ ನಾಟಕವಾಡಿ, ಮತ್ತೊಂದು ಕಡೆ ಗೋಮಾಂಸ ರಫ್ತಿಗೆ ಬೆಂಬಲ ನೀಡುತ್ತಿರುವ ಪಕ್ಷವನ್ನು ಪ್ರತಿನಿಧಿಸುತ್ತಿರುವ ಸಚಿವ ಈಶ್ವರಪ್ಪ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಆಪರೇಷನ್ ಕಮಲದ ಮೂಲಕ ಇಡೀ ರಾಜಕೀಯ ಕ್ಷೇತ್ರವನ್ನು ಕಲುಷಿತಗೊಳಿಸಿದವರಿಂದ ನೀತಿ ಪಾಠ ಕಲಿಯುವ ಅನಿವಾರ್ಯತೆ ಕಾಂಗ್ರೆಸ್ಸಿಗಿಲ್ಲ. ಬಿಜೆಪಿ ಗೋವುಗಳ ಬಗ್ಗೆ ಅನುಕಂಪದ ಮಾತುಗಳನ್ನಾಡುತ್ತದೆ ಎಂದರೆ ಅದು ಭೂತದ ಬಾಯಲ್ಲಿ ಭಗವದ್ಗೀತೆ ಆಡಿದಂತೆ ಎಂದು ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಬಿಡುವು ಮಾಡಿಕೊಂಡು ಕೊಡಗು ಜಿಲ್ಲೆಗೆ ಆಗಮಿಸಿದ ಸಚಿವರಿಗೆ ಇಲ್ಲಿನ ಬೆಳೆಗಾರರು, ರೈತರು ಮತ್ತು ಕಾರ್ಮಿಕ ವರ್ಗದ ಸಂಕಷ್ಟವನ್ನು ಅರಿಯಲು ಸಮಯ ಇರಲಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಅರ್ಥಹೀನ ಟೀಕೆಗಳಲ್ಲೇ ಕಾಲಹರಣ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಲಿ ಎಂದು ಒತ್ತಾಯಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ಕೊಡಗಿನ ಜನ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದು, ಇಲ್ಲಿಯವರೆಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರವನ್ನು ಬಿಡುಗಡೆ ಮಾಡಿಲ್ಲ. ಜಿಲ್ಲೆಯಲ್ಲಿ ಹುಟ್ಟುವ ಕಾವೇರಿ ನದಿಯ ನೀರಿನ ಲಾಭವನ್ನು ಇಡೀ ರಾಜ್ಯ ಪಡೆಯುತ್ತಿದೆ. ಆದರೆ ಇದಕ್ಕೆ ಪ್ರತಿಯಾಗಿ ಸಂಕಷ್ಟದ ಸಂದರ್ಭದಲ್ಲೂ ಸರ್ಕಾರ ಸ್ಪಂದಿಸದೆ ನಿರ್ಲಕ್ಷ್ಯ ತೋರಿದೆ. ಗ್ರಾಮೀಣ ಜನರು ಹಾಗೂ ಕೃಷಿಕ ವರ್ಗಕ್ಕೆ ಆಗಿರುವ ನಷ್ಟಗಳಿಗೆ ಮೊದಲು ಪರಿಹಾರ ಘೋಷಿಸುವ ಕಾರ್ಯವನ್ನು ಗ್ರಾಮೀಣ ಅಭಿವೃದ್ಧಿ ಸಚಿವ ಈಶ್ವರಪ್ಪ ಅವರು ಮಾಡಲಿ, ನಂತರ ಟೀಕೆಗಳಿಗೆ ಸಮಯವನ್ನು ಮೀಸಲಿಡಲಿ ಎಂದು ಸುರೇಶ್ ಒತ್ತಾಯಿಸಿದ್ದಾರೆ.