ಹರಿಯಾಣ ಮೈತ್ರಿ ಸರಕಾರಕ್ಕೆ ಕೃಷಿ ಕಾಯಿದೆ ಆತಂಕ

January 13, 2021

ಚಂಡೀಗಢ: ಮೂರು ಕೃಷಿ ಕಾಯಿದೆಗಳ ವಿರುದ್ಧದ ರೈತ ಹೋರಾಟ ಬಿರುಸುಗೊಂಡಿರುವ ನಡುವೆಯೇ ಹರಿಯಾಣದ ಬಿಜೆಪಿ-ಜೆಜೆಪಿ ಮೈತ್ರಿ ಸರಕಾರದ ಮೇಲೆ ತೀವ್ರ ಒತ್ತಡ ಸೃಷ್ಟಿಯಾಗಿದೆ. “ನೂತನ ಕಾಯಿದೆಗಳನ್ನು ತಕ್ಷಣ ರದ್ದುಗೊಳಿಸಿ, ಇಲ್ಲದೇ ಹೋದರೆ ನಾವು ಭಾರೀ ಬೆಲೆ ತೆರಬೇಕಾಗುತ್ತದೆ,” ಎಂದು ಮೈತ್ರಿಕೂಟದ ಜೆಜೆಪಿ ಶಾಸಕರ ಬಣವೊಂದು ಮಂಗಳವಾರ ಕಳವಳ ವ್ಯಕ್ತಪಡಿಸಿದೆ.

ಜೆಜೆಪಿ ಮುಖ್ಯಸ್ಥ, ಉಪ ಮುಖ್ಯಮಂತ್ರಿ ದುಷ್ಯಂತ್‌ ಚೌಟಾಲ ಅವರು ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಜತೆಗೂಡಿ ಮಂಗಳವಾರ ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮಾತುಕತೆಯನ್ನೂ ನಡೆಸಿದ್ದಾರೆ. ರೈತ ಪ್ರತಿಭಟನೆಯಿಂದ ಮುಂದಿನ ದಿನಗಳಲ್ಲಿಉದ್ಭವಿಸಬಹುದಾದ ಹೊಸ ಸವಾಲುಗಳ ಕುರಿತು ಅವರು ಈ ವೇಳೆ ಚರ್ಚಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಒ.ಪಿ.ಧನ್‌ಕರ್‌ ಕೂಡ ಈ ಭೇಟಿ ವೇಳೆ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ಮಂಡಿಸಿದರು.

ದುಷ್ಯಂತ್‌ ಅವರು ದಿಲ್ಲಿಗೆ ತೆರಳುವ ಮೊದಲು ಅವರನ್ನು ಜೆಜೆಪಿ ಶಾಸಕರ ಬಣ ಭೇಟಿ ಮಾಡಿ, ಕಾಯಿದೆ ರದ್ದು ಕುರಿತ ತಮ್ಮ ಅಭಿಪ್ರಾಯ ಹಂಚಿಕೊಂಡಿತ್ತು. “ರೈತರು ಸುತಾರಾಂ ಒಪ್ಪದೇ ಇರುವ ಕಾಯಿದೆಗಳನ್ನು ಬಲವಂತವಾಗಿ ಅವರ ಮೇಲೆ ಹೇರುವುದು ಬೇಡ. ಅದರಿಂದ ಮುಂದಿನ ದಿನಗಳಲ್ಲಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ಒದಗುತ್ತದೆ. ಈಗಿನ ಮೈತ್ರಿ ಸರಕಾರ ಉಳಿಸಿಕೊಳ್ಳುವುದು ಕೂಡ ಕಷ್ಟವಾಗುತ್ತದೆ,” ಎಂದು ಆತಂಕ ವ್ಯಕ್ತಪಡಿಸಿದ್ದರು.

error: Content is protected !!