ರೂ. 16 ಲಕ್ಷ ವೆಚ್ಚದಲ್ಲಿ ಗೆಜ್ಜೆಹಣಕೊಡು ರಸ್ತೆ ಅಭಿವೃದ್ಧಿ

13/01/2021

ಮಡಿಕೇರಿ ಜ. 13 : ಸೋಮವಾರಪೇಟೆ ಸಮೀಪದ ಗೆಜ್ಜೆ ಹಣಕೊಡು ಗ್ರಾಮದ ಎರಡು ಕಡೆ ತಲಾ 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಚಾಲನೆ ನೀಡಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಲಿದ್ದು, ಕಾಮಗಾರಿ ವೇಳೆ ಗ್ರಾಮಸ್ಥರು ಗಮನ ಹರಿಸುವಂತೆ ಸಲಹೆ ನೀಡಿದರು.
ಈ ಹಿಂದೆ ಗ್ರಾಮದ ರಸ್ತೆ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ರೂ. 15 ಲಕ್ಷ ಒದಗಿಸಾಲಗಿದ್ದು, ಜಿ.ಪಂ ಇಂಜಿನಿಯರಿಂಗ್ ಇಲಾಖೆ ಮೂಲಕ ರೂ. 10 ಲಕ್ಷದ ಕಾಮಗಾರಿ ಮುಗಿಸಲಾಗಿದೆ. ಉಳಿದ ರೂ. 5 ಲಕ್ಷದ ಕಾಮಗಾರಿ ತಕ್ಷಣವೇ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಮಾತನಾಡಿ, ಶಾಸಕ ರಂಜನ್ ಅವರ ಪ್ರಯತ್ನದಿಂದ ಗ್ರಾಮೀಣ ರಸ್ತೆಗಳು ಅಭಿವೃದ್ಧಿ ಕಾಣುವಂತಾಗಿದೆ ಎಂದರು.
ಈ ಸಂದರ್ಭ ಕೊಡಗು ಜಿ.ಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಮನುಕುಮಾರ್ ರೈ, ಭರತ್ ಕುಮಾರ್, ಗ್ರಾಮ ಸಮಿತಿ ಅಧ್ಯಕ್ಷ ಶಶಿಧರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲ ಅಭಿಯಂತರ ಮೋಹನ್ ಕುಮಾರ್, ಗ್ರಾಮದ ಪ್ರಮುಖರಾದ ಧರ್ಮಪ್ಪ, ಜಯರಾಜ್, ದಯಾನಂದ, ವೇದಾಂತಯ್ಯ ಹಾಗೂ ಮತ್ತಿತರರು ಹಾಜರಿದ್ದರು.