ಲೋಕ ಕಲ್ಯಾಣಾರ್ಥವಾಗಿ ಜ.15 ರಂದು ಭಾಗಮಂಡಲದಲ್ಲಿ ಚಂಡಿಕಾ ಹೋಮ

January 13, 2021

ಮಡಿಕೇರಿ ಜ.13 : ಶ್ರೀಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಜ.15ರಂದು ಭಾಗಮಂಡಲದಲ್ಲಿ ಗಣಪತಿ ಹೋಮ, ಚಂಡಿಕಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಲಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವರಿಗೆ ಅಗಸ್ತ್ಯ ಮಹರ್ಷಿ ಹಾಗೂ ಅಮ್ಮ ಕೊಡವರಿಗೆ ಕಾವೇರಮ್ಮನ ಶಾಪ ಇರುವುದಾಗಿ ಪುರಾಣದಲ್ಲಿ ಉಲ್ಲೇಖವಿದೆ. ಇದರ ವಿಮೋಚನೆಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ಯಾಗವನ್ನು ಮಾಡಬೇಕೆಂದು ತಂತ್ರಿಗಳ ಪ್ರಶ್ನೆಯಿಂದ ತಿಳಿದು ಬಂದ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳಿಂದ ಶ್ರೀಗಣಪತಿ ಹೋಮ, ಚಂಡಿಕಾ ಹೋಮ, ಶ್ರೀಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಶತರುದ್ರಾಭಿಷೇಕ ಪಠಣ ಕಾರ್ಯವನ್ನು ನಡೆಸುತ್ತಾ ಬರಲಾಗುತ್ತಿದೆ ಎಂದರು.
ಇದೀಗ ಎಂಟನೇ ವರ್ಷವು ಯಾಗವನ್ನು ಮಾಡಲಾಗುತ್ತಿದ್ದು, ಈಗಾಗಲೇ ಶೇ.45 ರಷ್ಟು ಶಾಪ ವಿಮೋಚನೆಯಾಗಿದೆ ಎಂದು ಅಷ್ಟಮಂಗಲ ಪ್ರಶ್ನೆಯಿಂದ ತಿಳಿದು ಬಂದಿದೆ. ಇನ್ನೂ ಐದು ವರ್ಷಗಳ ಕಾಲ ಯಾಗವನ್ನು ಮುಂದುವರೆಸುವ ಅಗತ್ಯವಿದೆ ಎಂದು ತಿಳಿಸಿದರು.
ಜ.15 ರಂದು ಬೆಳಗ್ಗೆ 7 ಗಂಟೆಯಿಂದ ಕಾವೇರಿ ತೀರದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ಜರುಗಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಯ್ಯ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಮುಕ್ಕಾಟೀರ ಎ.ನಾಣಯ್ಯ, ಟ್ರಸ್ಟಿಗಳಾದ ಪಾಸುರ ಸಿ.ಕಾವೇರಪ್ಪ ಹಾಗೂ ಕೊಳ್ಳಿಮಾಡ ಪೆಮ್ಮಯ್ಯ ಉಪಸ್ಥಿತರಿದ್ದರು.

error: Content is protected !!