ಶೀಘ್ರ ಬೆಳ್ಳಿ ತೆರೆಗೆ ಬರಲಿದೆ ಕೊಡವ ಚಲನಚಿತ್ರ ‘ಉಸಾರ್’ !

January 13, 2021

ಮಡಿಕೇರಿ ಜ.13 : ಯುವ ಪೀಳಿಗೆಯ ಬದುಕನ್ನು ಹಾಳುಗೆಡಹುತ್ತಿರುವ ಮಾದಕ ದ್ರವ್ಯದ ಬಳಕೆಯಿಂದ ಸಮಾಜದ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ಆಧರಿಸಿ ನಿರ್ಮಿಸಲಾಗಿರುವ ಕೊಡವ ಭಾಷೆಯ 14 ನೇ ಚಲನ ಚಿತ್ರ ‘ಉಸಾರ್’ ಬೆಳ್ಳಿ ಪರದೆಯ ಮೇಲೆ ಪ್ರದರ್ಶನಗೊಳ್ಳಲು ಅಂತಿಮ ಸಿದ್ಧತೆಗಳು ನಡೆದಿರುವುದಾಗಿ ಚಲನಚಿತ್ರದ ನಿರ್ಮಾಪಕಿ ಪಾಸುರ ರಮ್ಯಾ ನಾಣಯ್ಯ ತಿಳಿಸಿದ್ದಾರೆ.
ಪಿ ಅಂಡ್ ಜಿ ಕ್ರಿಯೇಷನ್ಸ್ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಕೊಡವ ಪ್ರಾದೇಶಿಕ ಭಾಷೆಯ ಉಸಾರ್ ಚಲನಚಿತ್ರದ ಚಿತ್ರೀಕರಣದ ವೇಳೆ ಅಯೋಜಿತ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಹುತೇಕ ಕೊಡಗಿನ ಕಲಾವಿದರುಗಳನ್ನು ಬಳಸಿಕೊಂಡು, ಕೋವಿಡ್ ನಿಯಮಗಳ ಅನ್ವಯ ಕಳೆದ ಎಂಟು ತಿಂಗಳ ಕಾಲ ಕೊಡಗಿನ ಪ್ರಕೃತಿ ರಮ್ಯ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು, ಶೀಘ್ರ ಬೆಳ್ಳಿ ತೆರೆಯಲ್ಲಿ ಪ್ರದರ್ಶನಗೊಳ್ಳಲಿದೆಯೆಂದು ಹರ್ಷ ವ್ಯಕ್ತಪಡಿಸಿದರು.
ಬಾಳೆಯಡ ಪ್ರತೀಶ್ ಮತ್ತು ಗಗನ್ ಅವರುಗಳು ಚಲನಚಿತ್ರವನ್ನು ನಿರ್ದೇಶಿಸಿದ್ದು, ಛಾಯಾ ಗ್ರಹಣವನ್ನು ಪಾಪಣ್ಣ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಮೋಹನ್ ಮತ್ತು ವಿಲ್‍ಸ್ಟನ್ ನೀಡಿದ್ದು, ಚಿತ್ರ ಸಂಕಲನವನ್ನು ಸಂಕೇತ್ ಶಿವಪ್ಪ ಹಾಗೂ ನೃತ್ಯ ಸಂಯೋಜನೆಯನ್ನು ಮುಂಡಚಾಡಿರ ರಿನ್ನಿ ಚೆಂಗಪ್ಪ ಮತ್ತು ಮಲ್ಲಮಾಡ ಶ್ಯಾಮಲ ಅವರು ಮಾಡಿರುವುದಾಗಿ ಮಾಹಿತಿಯನ್ನಿತ್ತರು.
ಮೂರು ಹಾಡುಗಳು- ಚಿತ್ರದಲ್ಲಿ ಮೂರು ಹಾಡುಗಳಿದ್ದು, ಇದಕ್ಕೆ ಅಮ್ಮಣಿಚಂಡ ಪ್ರವೀಣ್ ಚೆಂಗಪ್ಪ, ಚೊಟ್ಟಂಡ ಪ್ರಭು ಸೋಮಯ್ಯ ಮತ್ತು ಚೊಟ್ಟೆಯಂಡಮಾಡ ವಿಜು ಬೆಳ್ಯಪ್ಪ ಅವರು ಸಾಹಿತ್ಯ ಒದಗಿಸಿದ್ದಾರೆ. ಯುವ ಗಾಯಕ ಶರಣ್ ಅಯ್ಯಪ್ಪ, ಮಾಳೇಟಿರ ಅಜಿತ್ ಪೂವಣ್ಣ, ಬಟ್ಟಿಯಂಡ ಲಿಕಿತ ಮತ್ತು ನೆಲ್ಲಮಕ್ಕಡ ಶಶಾಂಕ್ ಪೊನ್ನಪ್ಪ ಅವರು ಧ್ವನಿ ನೀಡಿದ್ದಾರೆಂದು ತಿಳಿಸಿದರು.
ಚಿತ್ರ ನಿರ್ದೇಶಕ ಬಾಳೆಯಡ ಪ್ರತೀಶ್ ಮಾತನಾಡಿ, ಆರಂಭದಲ್ಲಿ ಇಪ್ಪತ್ತು ನಿಮಿಷಗಳ ಕಿರುಚಿತ್ರದ ಬಗ್ಗೆ ಚಿಂತಿಸಲಾಗಿತ್ತಾದರು, ಬಳಿಕ ಅದು ಪೂರ್ಣ ಪ್ರಮಾಣದ ಚಲನ ಚಿತ್ರವಾಗಿ ರೂಪುಗೊಂಡಿದೆ. ಚಿತ್ರದ ರೀ ರೆಕಾರ್ಡಿಂಗ್ ಮತ್ತು ಡಬ್ಬಿಂಗ್ ಕಾರ್ಯವು ವಿರಾಜಪೇಟೆಯ ಮೋಹನ್ ಸ್ಟುಡಿಯೋದಲ್ಲಿ ನಡೆಯುತ್ತಿದೆ ಎಂದರು. ಮತ್ತೋರ್ವ ನಿದೆರ್Éೀಶಕರಾದ ಗಗನ್ ಮಾತನಾಡಿ, ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವ ಉದ್ದೇಶದಿಂದ ‘ಉಸಾರ್’ ಚಲನ ಚಿತ್ರ ನಿರ್ಮಿಸಲಾಗಿದೆ ಎಂದರು.
ಚಲನಚಿತ್ರದ ತಾರಾಂಗಣದಲ್ಲಿ ಬಲ್ಲಾರಂಡ ರಾಜೇಶ್, ಕುಪ್ಪಣಮಾಡ ಭೂಮಿಕ, ಅಮ್ಮಾಟಂಡ ದಿಲೀಪ್, ತಾತಂಡ ಮೋನಿಕ, ವಾಂಚೀರ ವಿಠಲ ನಾಣಯ್ಯ, ತಾತಂಡ ಪ್ರಭಾ ನಾಣಯ್ಯ, ಮಲ್ಲಮಾಡ ಶ್ಯಾಮಲ, ಕೋಳೆರ ಸನ್ನು, ವಾಂಚೀರ ಜಯ, ಚಾರಿಮಂಡ ಬೋಪಣ್ಣ, ಕುಪ್ಪಣಮಾಡ ಜಾನ್ಸಿ, ಕೇಚಮಾಡ ಪ್ರಮೀತ, ಕೊಂಗಂಡ ವದನ್, ಆಪಾಡಂಡ ಧನು, ವಿಜಯ್ ವರ್ಷ, ಬಿದ್ದಂಡ ಉತ್ತಮ್, ಈಶಾ ಇರುವುದಾಗಿ ಮಾಹಿತಿ ನೀಡಿದರು.

error: Content is protected !!