ಕೋವಿಡ್ ಲಸಿಕಾ ಅಭಿಯಾನ : ಅಗತ್ಯ ಸಿದ್ಧತೆಗೆ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಸೂಚನೆ

January 13, 2021

ಮಡಿಕೇರಿ ಜ.13 : ಕೋವಿಡ್ ಲಸಿಕಾ ಅಭಿಯಾನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ಪರಿಸ್ಥಿತಿ ಮತ್ತು ಲಸಿಕೆ ಅಭಿಯಾನ ಸಂಬಂಧ ಬುಧವಾರ ಮಾಹಿತಿ ಪಡೆದು ಅವರು ಮಾತನಾಡಿದರು.
ಕೋವಿಡ್ ಲಸಿಕೆ ಪೂರೈಕೆಯಾಗುತ್ತಿದ್ದು, ಆ ನಿಟ್ಟಿನಲ್ಲಿ ನಿಯಮಾನುಸಾರ ಜಿಲ್ಲೆಗೆ ತರಿಸಿಕೊಳ್ಳಬೇಕು. ಲಸಿಕೆ ದಾಸ್ತಾನು ಸಂಬಂಧಿಸಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಸೂಚಿಸಿದರು.
ಕೋವಿಡ್ ಲಸಿಕಾ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ರೀತಿಯ ವದಂತಿಗಳಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ 5,049 ಹಾಗೆಯೇ 1,511 ಖಾಸಗಿ ಆಸ್ಪತ್ರೆ ವ್ಯಾಪ್ತಿಯ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಪ್ರಾಥಮಿಕ, ಸಮುದಾಯ ಹಾಗೂ ವೈದ್ಯಕೀಯ ಶಿಕ್ಷಣ ವ್ಯಾಪ್ತಿಯ ಒಟ್ಟು 39 ಕಡೆಗಳಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ 50 ಮಂದಿ ಹೋಮ್ ಐಸೋಲೇಷನ್‍ನಲ್ಲಿ ಇದ್ದಾರೆ ಎಂದು ಡಾ.ಕೆ.ಮೋಹನ್ ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಅವರು 2018 ಮತ್ತು 19 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂಬಂಧ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳಿಗೆ ಇದುವರೆಗೆ ‘ಹಣ ಬಳಕೆ ಪ್ರಮಾಣ ಪತ್ರ’ ನೀಡದಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.
2018 ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಡಿ ಕೈಗೊಳ್ಳಲಾಗಿದ್ದ ಕಾಮಗಾರಿಗಳಿಗೆ ಇನ್ನೂ ಏಕೆ ಯುಸಿ ನೀಡಿಲ್ಲ ಎಂದು ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಈ ಸಂಬಂಧ ಇಂದೇ ಯುಸಿ ನೀಡಬೇಕು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜನಿಯರಿಂಗ್ ವಿಭಾಗ, ಪಿಎಂಜಿಎಸ್‍ವೈ, ಸಣ್ಣ ನೀರಾವರಿ, ಸ್ಥಳೀಯ ಸಂಸ್ಥೆಗಳು ಹೀಗೆ ಹಲವು ಇಲಾಖೆಗಳು ಕಾಮಗಾರಿಯ ಹಣ ಬಳಕೆ ಪ್ರಮಾಣ ಪತ್ರ ನೀಡಲು ಬಾಕಿ ಇದೆ ಎಂದು ತಿಳಿಸಿದರು.
ಪ್ರಕೃತಿ ವಿಕೋಪ ಕಾಮಗಾರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರಿಗೆ ವರದಿ ನೀಡಬೇಕಿದ್ದು, ಈ ನಿಟ್ಟಿನಲ್ಲಿ ಕಾಮಗಾರಿಯ ಹಣ ಬಳಕೆ ಪ್ರಮಾಣ ಪತ್ರವನ್ನು ಕೂಡಲೇ ನೀಡಬೇಕು. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಿರ್ದೇಶನ ನೀಡಿದರು.,
ಪ್ರಕೃತಿ ವಿಕೋಪ ನಿರ್ವಹಣೆಗಾಗಿ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ನಡಿ ವಿಶೇಷ ಅನುದಾನ ಬಿಡುಗಡೆಯಾಗಿದ್ದು, ಈ ವಿಶೇಷ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳಿಗೆ ಹಣ ಬಳಕೆ ಪ್ರಮಾಣ ಪತ್ರ ನೀಡಬೇಕು. ಹಾಗೆಯೇ 2019-20 ರಲ್ಲಿ 100 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಅವರು ಕಾಮಗಾರಿಯ ಹಣ ಬಳಕೆ ಪ್ರಮಾಣ ಪತ್ರ ಪಡೆಯುವ ನಿಟ್ಟಿನಲ್ಲಿ ಜಿ.ಪಂ.ಸಿಇಒ, ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ಅವರು ತಮ್ಮ ವ್ಯಾಪ್ತಿಯಲ್ಲಿ ಮೇಲ್ವಿಚಾರಣೆ ಮಾಡಿ ಯುಸಿ ತರಿಸಿಕೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದರು.
ಪ್ರಸಕ್ತ ಸಾಲಿನ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳು ಸೂಕ್ತ ಕಾಲವಾಗಿದ್ದು, ಈ ವೇಳೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ತೋರಬಾರದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ತಿಳಿಸಿದರು.
ಸಕಾಲ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು. ಇದೇ ಜನವರಿ, 25 ರಂದು ಮತದಾರರ ದಿನಾಚರಣೆ ಇದ್ದು, ತಾಲ್ಲೂಕು ಮತ್ತು ಬೂತ್ ಮಟ್ಟದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕಾರ್ಯಕ್ರಮ ಆಯೋಜಿಸಬೇಕು ಎಂದು ಅವರು ಸಲಹೆ ಮಾಡಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕಳೆದ ವಾರ ಜಿಲ್ಲೆಯಲ್ಲಿ ಅಕಾಲಿಕ ಮಳೆ ಸುರಿದಿದ್ದು, ಬೆಳೆ ನಷ್ಟ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕೋವಿಡ್ ನಿರ್ವಹಣೆ ಸಂಬಂಧಿಸಿದಂತೆ ವೈದ್ಯಕೀಯ ಕಾಲೇಜಿನ ಅಧೀಕ್ಷಕರಾದ ಲೋಕೇಶ್, ಜಿ.ಪಂ. ಎಂಜಿನಿಯರ್ ಶ್ರೀಕಂಠಯ್ಯ, ಪಿಎಂಜಿಎಸ್‍ವೈ ಎಂಜಿನಿಯರ್ ಪ್ರಭು, ಸಣ್ಣ ನೀರಾವರಿ ಇಲಾಖೆಯ ಎಂಜನಿಯರ್ ಕಾಂತರಾಜು, ತಹಶೀಲ್ದಾರ್ ಮಹೇಶ್, ಯೋಗಾನಂದ, ಪೌರಾಯುಕ್ತರಾದ ರಾಮದಾಸ್, ಪ.ಪಂ.ಮುಖ್ಯಾಧಿಕಾರಿ ಶ್ರೀಧರ, ಸಜೀಲ್ ಕುಮಾರ್ ಅವರು ಹಣ ಬಳಕೆ ಪ್ರಮಾಣ ಪತ್ರ ನೀಡುವ ಸಂಬಂಧ ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪ ಇತರರು ಇದ್ದರು.

error: Content is protected !!