ಮತದಾರರ ಪಟ್ಟಿ ಇ-ರೋಲ್ ಬಗ್ಗೆ ಮಾಹಿತಿ ಪಡೆದ ವೀಕ್ಷಕರು

ಮಡಿಕೇರಿ ಜ.13 : ಭಾವಚಿತ್ರವಿರುವ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಇ-ರೋಲ್ ಬಗ್ಗೆ ಮತದಾರರ ಪಟ್ಟಿ ವೀಕ್ಷಕರಾದ ವಿ.ಅನ್ಬುಕುಮಾರ್ ಅವರು ಮಾಹಿತಿ ಪಡೆದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ಮತದಾರರ ಪಟ್ಟಿಯಲ್ಲಿ ತಪ್ಪುಗಳು ನುಸುಳಿದಲ್ಲಿ ಸರಿಪಡಿಸಬೇಕು. ಮತದಾರರ ಹೆಸರು, ಮತಗಟ್ಟೆಯ ಹೆಸರು, ಪಿನ್ ಕೋಡ್ ಸಂಖ್ಯೆ ನಿಖರವಾಗಿದೆಯೇ ಎಂಬ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.
18 ವರ್ಷ ಮೇಲ್ಪಟ್ಟವರಿಗೆ ಮತದಾರರ ಗುರುತಿನ ಚೀಟಿಯನ್ನು ನೀಡಬೇಕು. 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಇ-ರೋಲ್ ಚಟುವಟಿಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ತಹಶೀಲ್ದಾರ್ ಗೋವಿಂದರಾಜು(ಸೋಮವಾರಪೇಟೆ), ಮಹೇಶ್(ಮಡಿಕೇರಿ), ಯೋಗಾನಂದ(ವಿರಾಜಪೇಟೆ), ಶಿರಸ್ತೆದಾರರಾದ ಪ್ರಕಾಶ್, ಪ್ರವೀಣ್ ಕುಮಾರ್, ಶ್ರೀನಿವಾಸ್, ಮೋಹಿತ್, ವೆಂಕಟೇಶ್ ಅವರು ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪ ಇತರರು ಇದ್ದರು.



