ರಾಷ್ಟ್ರೀಯ ಯುವ ದಿನಾಚರಣೆ : ಸ್ವಾಮಿ ವಿವೇಕಾನಂದರ ಸಂದೇಶ ಯುವ ಜನಾಂಗಕ್ಕೆ ದಾರಿ ದೀಪ: ನ್ಯಾಯಾಧೀಶೆ ನೂರುನ್ನಿಸ

13/01/2021

ಮಡಿಕೇರಿ ಜ.13 : ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಕಾನೂನು ಶಿಬಿರ ಕಾರ್ಯಕ್ರಮವು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ನಡೆಯಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿವೇಕಾನಂದರ ಜೀವನಾದರ್ಶಗಳು ಅವರ ಸಂದೇಶಗಳು ಇಷ್ಟು ವರ್ಷಗಳ ಬಳಿಕವೂ ಪ್ರಸ್ತುತ ಯುವ ಜನಾಂಗಕ್ಕೆ ಹೇಗೆ ದಾರಿ ದೀಪವಾಗಿದೆ. ಸದೃಢ ದೇಶ ನಿರ್ಮಾಣಕ್ಕೆ ಬಾಹುಬಲ ಮತ್ತು ಬುದ್ಧಿಬಲ, ಉದಾತ್ತವಾದ ಗುರಿ, ಅದರ ಈಡೇರಿಕೆಗೆ ಬೇಕಾದ ಬಲವಾದ ಇಚ್ಛಾಶಕ್ತಿ ಇವುಗಳ ಅಳವಡಿಕೆಯ ಬಗ್ಗೆ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಕೀಲರಾದ ಕೆ.ಡಿ.ದಯಾನಂದ ಅವರು ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ತಿಳಿದುಕೊಂಡಿರಬೇಕಾದ ಹಾಗೂ ಕಡ್ಡಾಯವಾಗಿ ಅಳವಡಿಸಿಕೊಳ್ಳಲೇಬೇಕಾದ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಕೀಲರ ಸಂಘದ ಅಧ್ಯಕ್ಷರಾದ ಕವನ್ ಅವರು ವಿದ್ಯಾರ್ಥಿಗಳಿಗೆ ಕಾನೂನಿನ ಅರಿವಿನ ಜೊತೆಗೆ ಯುವ ಸಮೂಹ ದುಶ್ಚಟಗಳಿಂದ ಮುಕ್ತವಾಗಿ ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಿ.ಜೆ.ಜವರಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಪ್ರಸ್ತುತತೆಯನ್ನು ಕುರಿತು ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರ್ವಹಿಸಿದರು. ನಿವೇದಿತಾ ಪ್ರಾರ್ಥಿಸಿದರು. ಶಾಲಿನಿ ವಂದಿಸಿದರು. ಅಂಕಿತಾ ಡಿಸೋಜ ಅವರು ನಿರೂಪಿಸಿದರು.