ಸೋಮವಾರಪೇಟೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಕಳಪೆ : ಕರವೇ ಕಾರ್ಯಕರ್ತರ ಆರೋಪ

ಮಡಿಕೇರಿ ಜ. 14 : ಕೊಡ್ಲಿಪೇಟೆಯಿಂದ ಸೋಮವಾರಪೇಟೆ ವರೆಗೆ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದ್ದು, ಸಂಪೂರ್ಣವಾಗಿ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ಕರವೇ ಕಾರ್ಯಕರ್ತರು ಆರೋಪಿಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ರಾಜ್ಯ ಹೆದ್ದಾರಿಯ ರಸ್ತೆಗಳು ಸಂಪೂರ್ಣ ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರಕ್ಕೂ ತೊಂದರೆಯಾಗಿತ್ತು. ಇದೀಗ ಕೊಡ್ಲಿಪೇಟೆಯಿಂದ ಸೋಮವಾರಪೇಟೆ ವರೆಗೆ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದ್ದು, ಸಮರ್ಪಕವಾಗಿ ಡಾಂಬರ್ಗಳನ್ನು ತುಂಬುತ್ತಿಲ್ಲ ಎಂದು ಆರೋಪಿಸಿದರು.
ಕಾಮಗಾರಿ ನಡೆದ ಸ್ಥಳದಲ್ಲಿ ಗುತ್ತಿಗೆದಾರನಾಗಲಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲಿ ಇಲ್ಲದೇ ಕೆಲಸ ನಡೆಸಲಾಗುತ್ತಿದ್ದು, ಜವಾಬ್ದಾರಿಯುತ ವ್ಯಕ್ತಿಗಳು ಇಲ್ಲದ ಕಾರಣ, ಗುಂಡಿಗಳನ್ನು ಮುಚ್ಚಿಹೋದ ಅರ್ಧ ಗಂಟೆಯಲ್ಲೆ ಡಾಂಬರ್ಗಳು ಕಿತ್ತು ಹೋಗಿ ಗುಂಡಿಗಳು ಹಾಗೆ ಉಳಿದುಕೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ಗುಂಡಿಮುಚ್ಚುವ ಕಾರ್ಯವನ್ನು ಸ್ಥಗಿತಗೊಳಿಸಿ, ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಹೊಸದಾಗಿ ಟೆಂಡರ್ ಕರೆದು ನೂತನ ಗುತ್ತಿಗೆದಾರರಿಗೆ ಕಾಮಗಾರಿಯನ್ನು ನೀಡುವಂತೆ ಒತ್ತಾಯಿಸಿದರು.
