ಸಚಿವ ಸ್ಥಾನ ಸಿಗದೆ ಕೊಡಗಿಗೆ ಅನ್ಯಾಯವಾಗಿದೆ : ಜೆಡಿಎಸ್ ಅಸಮಾಧಾನ

14/01/2021

ಮಡಿಕೇರಿ ಜ.14 : ಕೊಡಗಿಗೆ ಸಚಿವ ಸ್ಥಾನವನ್ನು ನೀಡದೆ ವಂಚಿಸಿರುವ ರಾಜ್ಯ ಸರ್ಕಾರ ನಿರಂತರವಾಗಿ ಬಿಜೆಪಿಯನ್ನೇ ಬೆಂಬಲಿಸುತ್ತಾ ಬಂದಿರುವ ಜಿಲ್ಲೆಯ ಮತದಾರರನ್ನು ಮೂರ್ಖರನ್ನಾಗಿಸಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬಿಜೆಪಿಗೆ ಕೊಡಗು ಜಿಲ್ಲೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತ್ತಾಗಿದ್ದು, ಸರ್ಕಾರ ರಚನೆಗೆ ಅಗತ್ಯವಿರುವ ಶಾಸಕರುಗಳ ಸಂಖ್ಯೆಗಳಿಗಷ್ಟೇ ಇಲ್ಲಿನ ಎರಡು ಕ್ಷೇತ್ರಗಳನ್ನು ತನ್ನ ರಾಜಕೀಯ ಅಜೆಂಡಾದಲ್ಲಿರಸಿಕೊಂಡಿದೆ ಎಂದು ಟೀಕಿಸಿದ್ದಾರೆ.
ಕೋಮು ಸಂಘರ್ಷ ಮತ್ತು ಭಾವನಾತ್ಮಕ ವಿಚಾರಗಳಲ್ಲೇ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮೂಲಕ ಕೊಡಗಿನಲ್ಲಿ ಭದ್ರವಾಗಿ ನೆಲೆಯೂರಿರುವ ಬಿಜೆಪಿ ಎರಡನೇ ಹಂತದಲ್ಲೂ ಸಚಿವ ಸ್ಥಾನ ನೀಡದೆ ತನ್ನ ಮತದಾರರಿಗೆ ಮಾತ್ರವಲ್ಲದೆ ಜಿಲ್ಲೆಯ ಜನರಿಗೂ ಅನ್ಯಾಯ ಮಾಡಿದೆ. ಆದರೂ ಆ ಪಕ್ಷದ ಮುಖಂಡರುಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡದೆ ಇರುವುದನ್ನು ಗಮನಿಸಿದರೆ ಇದೊಂದು ರಾಜಕೀಯ ಒಳಒಪ್ಪಂದದ ನಾಟಕದಂತೆ ಕಂಡು ಬರುತ್ತಿದೆ. ಬಿಜೆಪಿ ನಡೆಸುತ್ತಿರುವ ರಾಜಕೀಯ ಡೊಂಬರಾಟದಿಂದಾಗಿ ಕೊಡಗು ಅನಾಥವಾಗುತ್ತಿದ್ದು, ಇಲ್ಲಿನ ಸಮಸ್ಯೆಗಳ ಅರಿವಿಲ್ಲದ ಹೊರ ಜಿಲ್ಲೆಯ ಸಚಿವರುಗಳಿಗೇ ಉಸ್ತುವಾರಿ ಹೊಣೆ ದೊರೆಯುತ್ತಿರುವುದು ಗುಲಾಮಗಿರಿಯ ಸಂಕೇತದಂತೆ ಭಾಸವಾಗುತ್ತಿದೆ ಎಂದು ಗಣೇಶ್ ಆರೋಪಿಸಿದ್ದಾರೆ.
ಈ ಹಿಂದೆ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಅವರು ಕೊಡಗಿನಿಂದ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸಿದರೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿನ ಮತದಾರರು ಬಿಜೆಪಿ ಮಂದಿಯ ಮೇಲೆ ಹೆಚ್ಚಿನ ವಿಶ್ವಾಸವಿಟ್ಟು ಮತ್ತೆ ಹಿಂದಿನ ಶಾಸಕರನ್ನೇ ಆಯ್ಕೆ ಮಾಡಿ ಕಳುಹಿಸಿದರು. ಆದರೆ ಅಧಿಕಾರಕ್ಕೆ ಬಂದ ಬಿಜೆಪಿ ವಿಶ್ವಾಸ ದ್ರೋಹ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಕೊಡಗಿಗೆ ಮೂವರು ಸಚಿವರನ್ನು ನೀಡಿತ್ತು. ಜೆಡಿಎಸ್‍ಗೆ ಸಚಿವ ಸ್ಥಾನ ನೀಡುವ ಮನಸ್ಸಿದ್ದರೂ ಜಿಲ್ಲೆಯ ಜನ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿಲ್ಲವೆಂದು ಗಣೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ಸ್ವಾಭಿಮಾನವಿದ್ದರೆ, ಯೋಧರ ನಾಡಿನ ಮೇಲೆ ಅಭಿಮಾನವಿದ್ದರೆ, ಪಕ್ಷ ಹೆಮ್ಮರವಾಗಿ ಬೆಳೆಯಲು ಕಾರಣಕರ್ತರಾದ ಕೊಡಗಿನ ಮತದಾರರ ಋಣ ತೀರಿಸುವ ಮನಸ್ಸಿದ್ದರೆ ತಕ್ಷಣ ಸಚಿವಗಿರಿಯನ್ನು ಘೋಷಿಸಲಿ. ಒಬ್ಬರಿಗಾದರೂ ಸಚಿವ ಸ್ಥಾನ ನೀಡಲಿ ಎಂದು ಅವರು ಒತ್ತಾಯಿಸಿದ್ದಾರೆ.