ಸುದೀರ್ಘ ರಜೆ : ಕೊಡಗು ಬಿಡುವ ಮುನ್ನ ಭಾವುಕರಾದ ಜಿಲ್ಲಾಧಿಕಾರಿ

January 14, 2021

ಮಡಿಕೇರಿ ಜ.14 : ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲಾಧಿಕಾರಿಗಳಾಗಿ ಉತ್ತಮ ಕಾರ್ಯ ನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದ ಅನೀಸ್ ಕಣ್ಮಣಿ ಜಾಯ್ ಅವರು ಜ.15 ರಿಂದ ಸುದೀರ್ಘ ರಜೆಯಲ್ಲಿ ಅಮೆರಿಕಾಕ್ಕೆ ತೆರಳುತ್ತಿದ್ದು, ಈ ಹಿನ್ನೆಲೆ ಜಿಲ್ಲಾಡಳಿತದಿಂದ ಹೃದಯ ಸ್ಪರ್ಶಿಯಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು ದೊಡ್ಡ ಅನುಭವ ನೀಡಿತು. ಈ ಹಿಂದೆ ತುಮಕೂರು ಜಿಲ್ಲೆಯಲ್ಲಿ ಸಿಇಒ ಹಾಗೂ ಬೀದರ್ ಜಿಲ್ಲೆಯಲ್ಲಿ ಉಪ ವಿಭಾಗಾಧಿಕಾರಿಯಾಗಿ ಕರ್ತವ್ಯಕ್ಕಿಂತ ಕೊಡಗು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ್ದು ವಿಭಿನ್ನ ಹಾಗೂ ವಿಶಿಷ್ಟವಾಗಿತ್ತು ಎಂದರು.
ಪ್ರಕೃತಿ ವಿಕೋಪ, ಕೋವಿಡ್ ನಿಯಂತ್ರಣ, ಲೋಕಸಭೆ ಮತ್ತು ಗ್ರಾ.ಪಂ ಚುನಾವಣೆ ಜೊತೆಗೆ ಸ್ಥಳೀಯ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ. ವಸತಿ, ಕಸವಿಲೇವಾರಿ, ವಸತಿ ಶಾಲೆ, ಸಮುದಾಯ ಭವನ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳಿಗೆ ಸುಮಾರು 274 ಎಕರೆ ಭೂಮಿ ಒದಗಿಸಿರುವುದು ತೃಪ್ತಿ ತಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾಧಿಕಾರಿಯಾಗಿ ಬಂದ ನಂತರದ ಒಂದು ವರ್ಷದಲ್ಲಿ ರಜೆ ಪಡೆದಿದ್ದು ಕಡಿಮೆ, ಕೊಡಗು ಜಿಲ್ಲೆಯೇ ಜೀವನ ಮತ್ತು ಕೆಲಸವಾಗಿತ್ತು, ಎಲ್ಲರ ಸಹಕಾರದಿಂದ ಹಲವು ಕಾರ್ಯಗಳನ್ನು ನಿಭಾಯಿಸಲು ಸಹಾಯವಾಯಿತು. ಕೊಡಗು ಜಿಲ್ಲೆ ಬಿಟ್ಟು ಹೋಗಲು ಮನಸ್ಸು ಬರುತ್ತಿಲ್ಲ, ಆದರೂ ತುಂಬಾ ಆಲೋಚನೆ ಮಾಡಿ ರಜೆಯಲ್ಲಿ ಅಮೆರಿಕಾಕ್ಕೆ ಕುಟುಂಬದೊಂದಿಗೆ ತೆರಳುತ್ತಿದ್ದೇನೆ’ ಎಂದು ಭಾವುಕರಾದರು.
ಪ್ರತಿಯೊಂದು ಇಲಾಖೆಯವರು ತಂಡವಾಗಿ ಕಾರ್ಯನಿರ್ವಹಿಸಿದ್ದರಿಂದ ಜಿಲ್ಲಾಡಳಿತಕ್ಕೆ ಮತ್ತು ವೈಯಕ್ತಿಕವಾಗಿಯೂ ಒಳ್ಳೆಯ ಹೆಸರು ಪಡೆಯಲು ಸಾಧ್ಯವಾಯಿತು. ಮುಂದಿನ ಜಿಲ್ಲಾಧಿಕಾರಿಗಳಿಗೂ ಸಹಕಾರ ನೀಡಿ ಎಂದು ಕೋರಿದರು.
ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ ಜಿಲ್ಲಾಧಿಕಾರಿಗಳು ತಂಡದ ನಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಯಾವುದೇ ರೀತಿಯ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತಿದ್ದರು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರು ಜಿಲ್ಲಾಧಿಕಾರಿ ಅವರು ಹೆಸರಿಗಷ್ಟೇ ಕಣ್ಮಣಿಯಾಗಿರಲಿಲ್ಲ, ಕೊಡಗಿನ ಕಣ್ಮಣಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ವರ್ಣಿಸಿದರು.
ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜು ಮಾತನಾಡಿ ಅತ್ಯಂತ ವಿಭಿನ್ನ, ಅವಿಸ್ಮರಣೀಯ ವ್ಯಕ್ತಿತ್ವ ಹಾಗೂ ತಾಯಿ ಹೃದಯದ ಗುಣವನ್ನು ಜಿಲ್ಲಾಧಿಕಾರಿ ಹೊಂದಿದ್ದರು ಎಂದು ಬಣ್ಣಿಸಿದರು.
ಡಿಎಚ್‍ಒ ಡಾ.ಕೆ.ಮೋಹನ್ ಅವರು ಕೋವಿಡ್-19 ನಿಯಂತ್ರಣಕ್ಕೆ ತುಂಬಾ ಶ್ರಮವಹಿಸಿದ್ದಾರೆ. ಅಧಿಕಾರಿಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಹಕಾರ ನೀಡಿದ್ದಾರೆ ಎಂದರು.
ಪೌರಾಯುಕ್ತರಾದ ರಾಮದಾಸ್ ಮಾತನಾಡಿ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಲು ಒಂದು ಎಕರೆ ಉತ್ತಮ ಜಾಗ ಹಾಗೂ ಕಸ ವಿಲೇವಾರಿಗೆ 10 ಎಕರೆ ಭೂಮಿ ನೀಡಿದ್ದು, ನಗರದ ಜನತೆ ಮರೆಯುವಂತಿಲ್ಲ ಎಂದರು.
ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್, ಐಟಿಡಿಪಿ ಅಧಿಕಾರಿ ಶಿವಕುಮಾರ್, ಅಗ್ನಿಶಾಮಕ ಅಧಿಕಾರಿ ಚಂದನ್, ಡಿಡಿಪಿಐ ಮಚ್ಚಾಡೊ ಇತರರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಕರ್ತವ್ಯ ನಿರ್ವಹಣೆ ಬಗ್ಗೆ ಗುಣಗಾನ ಮಾಡಿದರು.
ಇದೇ ಸಂದರ್ಭ ಕೊಡಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಹೊರತರಲಾಗಿರುವ ಕ್ಯಾಲೆಂಡರ್ ನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಬಿಡುಗಡೆ ಮಾಡಿದರು.

error: Content is protected !!