ಬಾಳೆಲೆ ಸಾವಿನ ಪ್ರಕರಣ : ತನಿಖೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

15/01/2021

ಮಡಿಕೇರಿ ಜ.15 : ಬಾಳೆಲೆಯಲ್ಲಿ ಇತ್ತೀಚೆಗೆ ನಡೆದ ಉತ್ತಪ್ಪ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ಯುವಕರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ ಎಂದು ಆರೋಪಿಸಿ ಮತ್ತು ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಮಿತಿಯ ಪ್ರಮುಖರು ಹಾಗೂ ಬಾಳೆಲೆ ಭಾಗದ ಸದಸ್ಯರು ಘಟನಾವಳಿಯ ಸಿಸಿ ಟಿವಿ ದೃಶ್ಯಾವಳಿ ಮತ್ತು ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಮಾತನಾಡಿ ಆಕಸ್ಮಿಕವಾಗಿ ಬಿದ್ದು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದ ಉತ್ತಪ್ಪ ಅವರು ಇಪ್ಪತ್ತು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಗ್ಗೆ ಮಾಹಿತಿ ಇದೆ. ಆದರೆ ತಪ್ಪು ಮಾಡದ ಯುವಕರ ವಿರುದ್ಧ ವಿನಾಕಾರಣ ಸುಳ್ಳು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ದೌರ್ಜನ್ಯವೂ ನಡೆದಿದೆ ಎಂದು ಆರೋಪಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಿ ಸಾವಿನ ನೈಜ ಕಾರಣವನ್ನು ಬಹಿರಂಗಪಡಿಸಬೇಕು, ಅಮಾಯಕ ಯುವಕರಿಗೆ ಸೂಕ್ತ ರಕ್ಷಣೆ ನೀಡಿ ನ್ಯಾಯ ಒದಗಿಸಿಕೊಡಬೇಕು ಮತ್ತು ದೌರ್ಜನ್ಯ ನಡೆಸಿದವರನ್ನು ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದರು.
ಮಡಿಕೇರಿ ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್, ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಎ.ಗಣೇಶ್, ಸಂಪಾಜೆ ಹೋಬಳಿ ಸಮಿತಿ ಸಂಚಾಲಕ ಶಶಿಕುಮಾರ್, ಮೂರ್ನಾಡು ನಗರ ಸಂಚಾಲಕ ರಘು, ಬಾಳೆಲೆಯ ಸರಸ್ವತಿ, ಜಯಲಕ್ಷ್ಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.