ಕೆರೆಗೆ ಬಿದ್ದ ಕಾರು : ತಾಯಿ, ಮಗಳ ಸಾವು : ಸುಂಟಿಕೊಪ್ಪ ಸಮೀಪ ಬಾಳೆಕಾಡಿನಲ್ಲಿ ಘಟನೆ

15/01/2021

ಮಡಿಕೇರಿ,ಜ.15: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ಹೆದ್ದಾರಿ ಬದಿಯಲ್ಲಿದ್ದ ಎಸ್ಟೇಟ್ ಒಂದರ ಕೆರೆಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ತಾಯಿ ಮತ್ತು ಮಗಳು ಇಬ್ಬರು ಜೀವಂತ ಜಲ ಸಮಾಧಿಯಾದ ಘಟನೆ ಮಡಿಕೇರಿ ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿ 275ರ ಬಾಳೆಕಾಡ್ ಬಳಿ ನಡೆದಿದೆ.
ಕುಶಾಲನಗರ ಮೂಲದ ಬವಿತ(ತಾಯಿ) ಮತ್ತು ಪಲ್ಲವಿ(ಮಗಳು) ಎಂಬವರೇ ಮೃತರ ದುರ್ದೈವಿಗಳಾಗಿದ್ದು, ಕಾರನ್ನು ಚಲಾಯಿಸುತ್ತಿದ್ದ ವೆಂಕಟೇಶ್ ನೀರಿನಲ್ಲಿ ಈಜಿ ದಡ ಸೇರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಕರ ಸಂಕ್ರಾತಿಯ ದಿನ ರಾತ್ರಿ 9.15 ಗಂಟೆಗೆ ಈ ದುರಂತ ಸಂಭವಿಸಿದ್ದು, ಘಟನೆ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಮೂಲತ ಕುಶಾಲನಗರ ನಿವಾಸಿಯಾದ ವೆಂಕಟೇಶ್ ಮಡಿಕೇರಿ ಅರಣ್ಯ ಇಲಾಖೆ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದು, ಜ.14ರಂದು ಪತ್ನಿ ಬವಿತ ಮತ್ತು ಮಗಳು ಪಲ್ಲವಿ ಅವರ ಜೊತೆ ಕುಶಾಲನಗರದಿಂದ ತಮ್ಮ ಆಲ್ಟೋ ಕಾರಿನಲ್ಲಿ(ಕೆಎ.12-ಪಿ.1102) ಪುತ್ತೂರು ಕಡೆ ತೆರಳಿದ್ದರು. ಬಳಿಕ ಮಡಿಕೇರಿ ಸುಂಟಿಕೊಪ್ಪ ಮಾರ್ಗವಾಗಿ ಪುತ್ತೂರಿನಿಂದ ಕುಶಾಲನಗರದ ಕಡೆ ತೆರಳುತ್ತಿದ್ದರು. ಈ ಸಂದರ್ಭ ರಾತ್ರಿ 9.15 ಗಂಟೆ ಸಮಯದಲ್ಲಿ ಬಾಳೆಕಾಡು ತಿರುವಿನಲ್ಲಿ ಕಾರು ಚಾಲಕ ವೆಂಕಟೇಶ್ ಅವರ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಬದಿಯಲ್ಲಿದ್ದ ಕೆರೆಗೆ ಬಿದ್ದಿದೆ.
ಭಾರಿ ಶಬ್ದ ಕೇಳಿ ಬಂದ ಹಿನ್ನಲೆಯಲ್ಲಿ ತೋಟದ ವ್ಯವಸ್ಥಾಪಕ ಪ್ರಸನ್ನ ಕುಮಾರ್ ಅವರು ಸ್ಥಳಕ್ಕೆ ಬಂದು ನೋಡಿದಾಗ ಕಾರು ಕೆರೆಗೆ ಬಿದ್ದಿರುವುದು ಕಂಡು ಬಂದಿದೆ. ಈ ಸಂದರ್ಭ ಕಾರಿನಲ್ಲಿದ್ದ ವೆಂಕಟೇಶ್ ಅವರು ಈಜಿ ದಡ ಸೇರಿದ್ದು, ಅವರನ್ನು ವಿಚಾರಿಸಿದ ಸಂದರ್ಭ ಕಾರಿನ ಒಳಗೆ ಪತ್ನಿ ಬಬಿತ ಮತ್ತು ಮಗಳು ಪಲ್ಲವಿ ಅವರುಗಳು ಇರುವುದಾಗಿ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ತೋಟದ ವ್ಯವಸ್ಥಾಪಕ ಸುಂಟಿಕೊಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತದನಂತರ ತೋಟ ಕಾರ್ಮಿಕರಾದ ಅಶೋಕ ಮತ್ತು ಬಾಲಕೃಷ್ಣ ಅವರುಗಳು ಪೊಲೀಸರ ಸಹಾಯದಿಂದ ರದೀಶ್ ಎಂಬವರ ಕ್ರೇನ್ ಮೂಲಕ ಕಾರನ್ನು ಮೇಲೆತ್ತಿ ಕಾರಿನಲ್ಲಿದ್ದ ಬವಿತ ಮತ್ತು ಪಲ್ಲವಿ ಅವರುಗಳ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಬಳಿಕ ಮೃತ ದೇಹಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಘಟನೆಯ ಬಗ್ಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸುತ್ತ ಮುತ್ತಲಿನ ನೂರಾರು ಮಂದಿ ಘಟನಾ ಸ್ಥಳದಲ್ಲಿ ಜಮಾಯಿಸಿ ದುರಂತದ ಬಗ್ಗೆ ಶೋಕ ವ್ಯಕ್ತಪಡಿಸುತ್ತಿದ್ದುದು ಕಂಡು ಬಂತು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತಡೆಗೋಡೆ ಇಲ್ಲದಿರುವುದು ಈ ದುರಂತಕ್ಕೆ ಕಾರಣವೆಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.