ಹಿಂದೂ ಕ್ರಿಕೆಟ್ ಪಂದ್ಯಾವಳಿಗೆ ಫೆ.12 ರಂದು ಮೂರ್ನಾಡಿನಲ್ಲಿ ಚಾಲನೆ

15/01/2021

ಮಡಿಕೇರಿ ಜ.15 : ಹಿಂದೂ ಕ್ರಿಕೆಟ್ ಕಪ್ ಸಮಿತಿ ವತಿಯಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಮೂರ್ನಾಡಿನಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಎ.ಕೆ.ಹರೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಮೈದಾನದಲ್ಲಿ ಫೆ.12, 13 ಮತ್ತು 14 ರಂದು ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಗೆ, ಆರಂಭಿಕ ದಿನದಂದು ಬೆಳಗ್ಗೆ 8.30ಕ್ಕೆ ಗೋ ಪೂಜೆ ನಡೆಸುವ ಮೂಲಕ ಚಾಲನೆ ನೀಡಲಾಗುವುದೆಂದರು.
ಪಂದ್ಯಾವಳಿಯಲ್ಲಿ ಆರಂಭಿಕ ಸುತ್ತುಗಳು ನಾಲ್ಕು ಓವರ್‍ಗಳಿಗೆ ಸೀಮಿತವಾಗಿರಲಿದೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ಆರು ಓವರ್‍ಗಳದ್ದಾಗಿರುತ್ತದೆ. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ 33,333 ರೂ.ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 22,222 ನಗದು ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ. ಇದರೊಂದಿಗೆ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್‍ಮನ್, ಶಿಸ್ತು ಬದ್ಧ ತಂಡ, ಸೇರಿದಂತೆ ಇನ್ನಿತರ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದೆಂದರು.
ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಗೆ ಒಳಪಟ್ಟ ಹಿಂದೂ ಯುವಕರನ್ನು ಒಳಗೊಂಡ ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಗೂಗಲ್ ಪೇ ನಂ. 9663828100ಗೆ ಮೈದಾನ ಶುಲ್ಕ 2,200 ರೂ. ಪಾವತಿಸಿ ಫೆ.5ರೊಳಗೆ ತಂಡಗಳು ಹೆಸರು ನೋಂದಾಯಿಸಿಕೊಳ್ಳಬಹುದೆಂದು ಮಾಹಿತಿ ನೀಡಿದರು.
ಕ್ರೀಡಾಪಟುಗಳು ಪಂದ್ಯಾವಳಿಗೆ ಆಗಮಿಸುವಾಗ ಕಡ್ಡಾಯವಾಗಿ ಆಧಾರ್ ಕಾರ್ಡ್ ಪ್ರತಿಗಳನ್ನು ತರಬೇಕು ಮತ್ತು ಪಂದ್ಯ ಪ್ರಾರಂಭವಾಗುವ ಅರ್ಧ ಗಂಟೆ ಮುಂಚಿತವಾಗಿ ಆಗಮಿಸಬೇಕೆಂದು ತಿಳಿಸಿದ ಅವರು, ಆಟಗಾರರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದರು. ಪಂದ್ಯಾವಳಿಯ ಬಗ್ಗೆ ಹೆಚ್ಚಿನ ಮಾಹಿತಿಗೆ 9480499766, 9945948992 ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಸಿ.ಎಲ್. ಜಯಂತ್ ಕುಮಾರ್, ಉಪಾಧ್ಯಕ್ಷ ಬಿ.ಎಸ್. ಅರುಣ್ ಪಾಪಯ್ಯ, ಸಹ ಕಾರ್ಯದರ್ಶಿ ಬಿ.ಎನ್. ಜಗದೀಶ್, ಖಜಾಂಚಿ ಕೆ.ಟಿ. ಮೋನಿಶ್ ಉಪಸ್ಥಿತರಿದ್ದರು.