ಕೊಡಗಿನಲ್ಲಿ ಜ.16 ರಂದು ಕೋವಿನ್ ಲಸಿಕಾ ಅಭಿಯಾನಕ್ಕೆ ಚಾಲನೆ

January 15, 2021

ಮಡಿಕೇರಿ ಜ.15 : ಕೋವಿನ್ ಲಸಿಕಾ ಅಭಿಯಾನಕ್ಕೆ ಜನವರಿ, 16 ರಂದು ಜಿಲ್ಲೆಯ ಐದು ಸ್ಥಳಗಳಲ್ಲಿ ಚಾಲನೆ ದೊರೆಯಲಿದೆ.
ಜಿಲ್ಲೆಯಲ್ಲಿ ಈಗಾಗಲೇ 4,000 ಕೋವಿನ್ ಲಸಿಕೆ ತಲುಪಿದ್ದು, ಲಸಿಕಾ ಅಭಿಯಾನಕ್ಕೆ ಜನವರಿ, 16 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಚಾಲನೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ತಿಳಿಸಿದರು.
ಜಿಲ್ಲೆಯ 5 ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಜಿಲ್ಲಾ ಆಸ್ಪತ್ರೆ, ಸೋಮವಾರಪೇಟೆಯ ತಾಲ್ಲೂಕು ಆಸ್ಪತ್ರೆ, ವಿರಾಜಪೇಟೆ ತಾಲ್ಲೂಕು ಆಸ್ಪತ್ರೆ, ಸಂತ ಮೈಕಲರ ಶಾಲೆಯಲ್ಲಿ ತಲಾ 100 ಮಂದಿಗೆ ಹಾಗೂ ಕಾಕೋಟುಪರಂಬು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 74 ಸೇರಿದಂತೆ ಒಟ್ಟು 474 ಮಂದಿಗೆ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿದರು.
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ 6,560 ಕೊರೊನಾ ವಾರಿಯರ್ಸ್‍ನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದರು.
ಮಾನ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪ, ಡಿವೈಎಸ್‍ಪಿ ಶೈಲೇಂದ್ರ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಾರ್ಯಪ್ಪ, ಡಾ.ಲೋಕೇಶ್, ಡಾ.ಮಹೇಶ್, ಡಾ.ಗೋಪಿನಾಥ್ ಇತರರು ಇದ್ದರು.

error: Content is protected !!