ನದಿ ತಟದಲ್ಲಿರುವ ಜನರಿಗೆ ಪುನರ್ವಸತಿ : ಕಾವೇರಿ ನದಿ ಗಡಿ ಗುರುತು ಸರ್ವೆಗೆ ಒತ್ತಾಯ

January 15, 2021

ಮಡಿಕೇರಿ ಜ.15 : ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಗಡಿ ಗುರುತು ಸರ್ವೆ ಮಾಡುವ ಮೂಲಕ ನದಿಯ ಸಂರಕ್ಷಣೆ ಮತ್ತು ನದಿ ತಟಗಳ ಅಭಿವೃದ್ಧಿ ಬಗ್ಗೆ ಹಾಗೂ ನದಿ ತಟದಲ್ಲಿರುವ ಜನರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಸರಕಾರದಿಂದ ಯೋಜನೆ ರೂಪಿಸಲು ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ಮತ್ತು ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಮುಖರು ಮನವಿ ಸಲ್ಲಿಸಿದ್ದು, ಈ ಬಾರಿಯ ಬಜೆಟ್‍ನಲ್ಲಿ ಅನುದಾನ ಮೀಸಲಿರಿಸುವಂತೆ ಕೋರಿದ್ದಾರೆ.
ಈ ಸಂಬಂಧ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿಯಲ್ಲಿ ಸಮಗ್ರ ವರದಿ ಸಲ್ಲಿಸಿದ್ದು ಮೂಲ ಕಾವೇರಿಯಿಂದ ಜಿಲ್ಲೆಯ ಗಡಿಭಾಗ ಶಿರಂಗಾಲ ತನಕ ನದಿ ಹರಿಯುವ ಸ್ಥಳಗಳ ಮತ್ತು ನದಿ ತಟಗಳ ವಾಸ್ತವ ಮಾಹಿತಿ ನೀಡಲಾಗಿದೆ.
ಜೀವನದಿ ಕಾವೇರಿ ಕೊಡಗು ಜಿಲ್ಲೆಯಲ್ಲಿ ಮೂಲದಿಂದಲೇ ನಿರಂತರವಾಗಿ ಕಲುಷಿತಗೊಳ್ಳುತ್ತಿದ್ದು ಅದಕ್ಕೆ ಪ್ರಮುಖ ಕಾರಣಗಳು ಪಟ್ಟಣ ಮತ್ತು ಗ್ರಾಮಗಳ ತ್ಯಾಜ್ಯಗಳು, ಕಲುಷಿತ ನೀರು ನದಿಗೆ ನೇರವಾಗಿ ಸೇರುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ನದಿ ತಟಗಳು ಅಕ್ರಮವಾಗಿ ಒತ್ತುವರಿಯಾಗುವುದರೊಂದಿಗೆ ಅಂಗಡಿ ಮುಂಗಟ್ಟುಗಳು, ಪ್ರವಾಸಿಗರಿಂದ ಉತ್ಪತ್ತಿಯಾಗುವ ತ್ಯಾಜ್ಯಗಳು ಅವೈಜ್ಞಾನಿಕವಾಗಿ ವಿಲೇವಾರಿಯಾಗುತ್ತಿರುವುದು ನದಿ ಮಾಲಿನ್ಯಗೊಳಿಸಲು ಪ್ರಮುಖ ಕಾರಣವಾಗಿವೆ. ಈ ಬಗ್ಗೆ ನಮ್ಮ ಸಮಿತಿಗೆ ಕಂಡುಬಂದ ವಾಸ್ತವ ಅಂಕಿ ಅಂಶಗಳನ್ನು ಒದಗಿಸಲಾಗಿದ್ದು ಈ ಬಗ್ಗೆ ಸರಕಾರದ ಮೂಲಕ ಮುಂದಿನ ಕ್ರಮಕ್ಕೆ ಮನವಿ ಮಾಡಲಾಗಿದೆ.
ಮಡಿಕೇರಿ ತಾಲ್ಲೋಕು ವ್ಯಾಪ್ತಿಯಲ್ಲಿ ತಲಕಾವೇರಿ, ಭಾಗಮಂಡಲ, ಬೆಂಗೂರು, ಕುಂದಚೇರಿ, ನಾಪೋಕ್ಲು, ಬಲ್ಲಮಾವಟಿ, ಪಾರಾಣೆ, ಹೊದ್ದೂರು, ಮೂರ್ನಾಡು ವ್ಯಾಪ್ತಿಯ ನದಿ ತಟಗಳಲ್ಲಿ ಆಗಬೇಕಾದ ಯೋಜನೆಗಳು :::
ತಲಕಾವೇರಿಯಲ್ಲಿ ಕುಡಿವ ನೀರಿನ ಘಟಕ ಸ್ಥಾಪನೆ, ಸಮುದಾಯ ಶೌಚಾಲಯ ಮತ್ತು ಸಮರ್ಪಕ ನಿರ್ವಹಣೆ.
ಭಾಗಮಂಡಲ ವ್ಯಾಪ್ತಿಯಲ್ಲಿ ಸಮುದಾಯ ಶೌಚಾಲಯ ನಿರ್ಮಾಣ, ಕುಡಿವ ನೀರಿನ ಘಟಕ ಸ್ಥಾಪನೆ, ಗ್ರಾಮಪಂಚಾಯ್ತಿಗೆ ಕಸ ವಿಲೇವಾರಿಗೆ ವಾಹನ ಸೌಲಭ್ಯ, ಶಾಶ್ವತ ಪರಿಹಾರಕ್ಕೆ ಒಳಚರಂಡಿ ಯೋಜನೆ ಅನುಷ್ಠಾನ.
ನಾಪೋಕ್ಲು ವ್ಯಾಪ್ತಿಯಲ್ಲಿ ನದಿ ತಟದಲ್ಲಿ ತಡೆಗೋಡೆ ನಿರ್ಮಾಣ, ನದಿ ತೀರದಲ್ಲಿರುವ ಒಂದು ಸಾವಿರಕ್ಕೂ ಅಧಿಕ ಮನೆಗಳ ಸ್ಥಳಾಂತರ ಹಾಗೂ ಪುನರ್ವಸತಿ ಕಲ್ಪಿಸುವುದು, ಕಸ ವಿಲೇವಾರಿಗೆ ವಾಹನ ಸೌಲಭ್ಯ, ಕೊಂಡಂಗೇರಿ ಸೇತುವೆ ಬಳಿ ತ್ಯಾಜ್ಯ ಹಾಕುವುದನ್ನು ನಿರ್ಭಂದಿಸಿ ನದಿಯ ರಕ್ಷಣೆ ಮಾಡುವುದು.
ನದಿ ಹರಿಯುವ ಮೂರ್ನಾಡು ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಯೋಜನೆ.

ವಿರಾಜಪೇಟೆ ತಾಲ್ಲೋಕು ವ್ಯಾಪ್ತಿಯ ಕಾಕೋಟುಪರಂಬು, ಬೇತ್ರಿ, ಹಾಲುಗುಂದ, ಕನ್ನಂಗಾಲ, ಸಿದ್ದಾಪುರ, ನೆಲ್ಲಿಹುದಿಕೇರಿ ಗ್ರಾಮಗಳ ವ್ಯಾಪ್ತಿಯ ಕಾವೇರಿ ನದಿ ತಟದ
ಕಾಕೋಟುಪರಂಬು ಮತ್ತು ಬೇತ್ರಿ ವ್ಯಾಪ್ತಿಯಲ್ಲಿ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯ ಸೇರುತ್ತಿದೆ. ನದಿ ತಟದಲ್ಲಿರುವ 100 ಕ್ಕೂ ಅಧಿಕ ಮನೆಗಳನ್ನು ಸ್ಥಳಾಂತರಿಸುವುದು. ಅವರುಗಳಿಗೆ ಪುನರ್ವಸತಿ ಕಲ್ಪಿಸುವ ಮೂಲಕ ನದಿ ತಟದ ಅಭಿವೃದ್ಧಿಗೊಳಿಸುವುದು.
ಹಾಲುಗುಂದ ಮತ್ತು ಕನ್ನಂಗಾಲ ವ್ಯಾಪ್ತಿಯಲ್ಲಿ ನದಿ ತೀರದಲ್ಲಿ 100 ಕ್ಕೂ ಅಧಿಕ ಮನೆಗಳು ಮತ್ತು ಕನ್ನಂಗಾಲ ವ್ಯಾಪ್ತಿಯಲ್ಲಿ 50 ಕ್ಕೂ ಅಧಿಕ ಮನೆಗಳು ಕಂಡುಬರುತ್ತಿವೆ.
ಸಿದ್ದಾಪುರ ನದಿ ತಟದಲ್ಲಿ 200 ಕ್ಕೂ ಅಧಿಕ ಮನೆಗಳಿಂದ ನೇರವಾಗಿ ತ್ಯಾಜ್ಯಗಳು ನದಿ ಸೇರುತ್ತಿವೆ. ಕಸ ವಿಲೇವಾರಿಗೆ ಕ್ರಮಕೈಗೊಳ್ಳುವುದು ಮತ್ತು ಸೂಚನಾ ಫಲಕದ ಮೂಲಕ ಜನರಿಗೆ ಅರಿವು ಮೂಡಿಸುವುದು. ಮಾರುಕಟ್ಟೆ ವ್ಯಾಪ್ತಿಯಲ್ಲಿ ಸಮುದಾಯ ಶೌಚಾಲಯ ನಿರ್ಮಾಣ, ನಿರ್ವಹಣೆ. ಮಾಂಸದ ಅಂಗಡಿಗಳಿಂದ ಹೊರಸೂಸುವ ತ್ಯಾಜ್ಯಗಳ ಸಮರ್ಪಕ ವಿಲೇವಾರಿ.
ಸಿದ್ದಾಪುರದಲ್ಲಿ ಒಳಚರಂಡಿ ಯೋಜನೆಗೆ ಕ್ರಮಕ್ಕೆ ಆದ್ಯತೆ ನೀಡುವುದು.
ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಮಾಂಸ, ಮೀನು ಅಂಗಡಿಗಳಿಂದ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಕಂಡುಬಂದಿದೆ. 100 ಕ್ಕೂ ಅಧಿಕ ಮನೆಗಳು ನದಿ ತಟದಲ್ಲಿ ನಿರ್ಮಾಣಗೊಂಡಿವೆ. ಕೆಲವೊಂದನ್ನು ತೆರವುಗೊಳಿಸುವ ಕಾರ್ಯ ನಡೆದಿದ್ದರೂ ಉಳಿದಂತೆ ತೆರವುಗೊಳಿಸಿ ಶಾಶ್ವತ ಪುನರ್ವಸತಿ ಕಲ್ಪಿಸುವುದು ಮತ್ತು ನದಿ ತಟವನ್ನು ಅಭಿವೃದ್ಧಿಗೊಳಿಸುವುದು.
ಸೋಮವಾರಪೇಟೆ ತಾಲ್ಲೋಕು ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ತಟದ ಗ್ರಾಮಗಳಾದ ನೆಲ್ಲಿಹುದಿಕೇರಿ, ವಾಲ್ನೂರು, ತಾಗತ್ತೂರು, ನಂಜರಾಯಪಟ್ಟಣ, ದುಬಾರೆ, ಗುಡ್ಡೆಹೊಸೂರು, ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ತೊರೆನೂರು ಮತ್ತು ಶಿರಂಗಾಲ ಹಾಗೂ ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ನಂಜರಾಯಪಟ್ಟಣದ ದುಬಾರೆ ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರಿಂದ ಉತ್ಪತ್ತಿಯಾಗುವ ತ್ಯಾಜ್ಯಗಳು ನೇರವಾಗಿ ನದಿ ಸೇರುತ್ತಿವೆ. ಪ್ರವಾಸಿಗರಿಗೆ ಮೋಟಾರ್ ಬೋಟ್ ಬಳಸುವ ಮೂಲಕ ನದಿಗೆ ಇಂಧನಗಳು ಸೇರ್ಪಡೆಗೊಂಡು ನೀರು ಕಲುಷಿತಗೊಳ್ಳುತ್ತಿದೆ. ದಿನನಿತ್ಯ ನೂರಾರು ಬಾರಿ ರಭಸದಿಂದ ಓಡಾಡುವ ಮೋಟಾರ್ ಬೋಟ್‍ಗಳಿಂದ ನದಿ ನಡುವೆ ಇರುವ ದ್ವೀಪಗಳು ಮತ್ತು ತಟಗಳು ಕರಗಿ ಸಸ್ಯ ಸಂಕುಲಗಳು ನಾಶಗೊಳ್ಳುವುದರೊಂದಿಗೆ ಜಲಚರಗಳು ಕೂಡ ನಾಶಗೊಳ್ಳುವ ಸಂಭವ ಅಧಿಕವಾಗಿ ಕಂಡುಬಂದಿದೆ. ಇವುಗಳನ್ನು ರದ್ದುಗೊಳಿಸಿ ಪೆಡಲ್ ಬೋಟ್‍ಗಳನ್ನು ಜಿಲ್ಲಾಡಳಿತ ಒದಗಿಸುವುದು. ನದಿಗೆ ಇಳಿಯಲು ಮತ್ತು ನಿರ್ಗಮಿಸಲು ಪ್ರತ್ಯೇಕ ಗೇಟ್‍ಗಳನ್ನು ಅಳವಡಿಸುವುದು. ರ್ಯಾಫ್ಟಿಂಗ್ ಕ್ರೀಡೆ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಗಮನ ಹರಿಸುವುದು.
ದುಬಾರೆ ಸಾಕಾನೆ ಶಿಬಿರಕ್ಕೆ ತೂಗುಸೇತುವೆ ನಿರ್ಮಾಣಕ್ಕೆ ಯೋಜನೆ ಹಾಗೂ ಸ್ಥಳೀಯ ಹೋಟೆಲ್ ಮತ್ತಿತರ ಕಟ್ಟಡಗಳಿಂದ ಕಲುಷಿತ ನೀರು ನೇರವಾಗಿ ನದಿಗೆ ಹರಿಯುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳುವುದು.
ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರನ್ನು ಸಂಪೂರ್ಣ ನಿರ್ಭಂದಿಸಿ ಚಿಕ್ಲಿಹೊಳೆ ಮತ್ತು ಹಾರಂಗಿ ಅಣೆಕಟ್ಟೆ ಬಳಿ ಆನೆಗಳ ಶಿಬಿರ ಪ್ರಾರಂಭಿಸಲು ಅರಣ್ಯ ಇಲಾಖೆಗೆ ಆದೇಶ ನೀಡುವುದು. ಪ್ರವಾಸಿ ಕೇಂದ್ರಗಳಲ್ಲಿ ಕುಡಿವ ನೀರಿನ ಘಟಕ ಸ್ಥಾಪಿಸಿ ಪ್ಲಾಸ್ಟಿಕ್ ಬಾಟಲಿಗಳ ಹಾವಳಿಯನ್ನು ತಪ್ಪಿಸುವುದು. ಪ್ರವಾಸಿಗರು ಕುಡಿವ ನೀರಿನ ಬಾಟಲ್ ಒಯ್ಯುವ ಸಂದರ್ಭ ನಿರ್ಭಂದ ಹೇರುವುದು ಅಥವಾ ಖಾಲಿ ಬಾಟಲಿಗಳನ್ನು ಎಸೆಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದು. ಪ್ರವಾಸಿ ಕೇಂದ್ರಗಳಲ್ಲಿ ಕಸದ ಬುಟ್ಟಿಗಳನ್ನು ಅಳವಡಿಸುವುದು. ಸ್ವಚ್ಚತಾ ಅಭಿಯಾನದ ಬಗ್ಗೆ ಅರಿವು ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಜನರನ್ನು ಮತ್ತು ಸಂಘಸಂಸ್ಥೆಗಳನ್ನು ಸ್ವಚ್ಚತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವುದು. ಗ್ರಾಮ ಮತ್ತು ಪ್ರವಾಸಿ ಕೇಂದ್ರಗಳನ್ನು ಖಾಸಗಿ ಸಂಸ್ಥೆಗಳ ಮೂಲಕ ನಿರ್ವಹಣೆಗೆ ಕೋರಿಕೊಳ್ಳುವುದು.
ಕುಶಾಲನಗರ ಪಟ್ಟಣದ ಬಹುತೇಕ ಬಡಾವಣೆಗಳು ಕಳೆದ ಮೂರು ವರ್ಷಗಳಿಂದ ಮಳೆಗಾಲದ ಅವಧಿಯಲ್ಲಿ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ಇದಕ್ಕೆ ಕಾರಣ ಹುಡುಕಲು ತಜ್ಞರ ಸಮಿತಿಯೊಂದನ್ನು ನೇಮಿಸುವುದು, ಬೈಚನಹಳ್ಳಿ ತಾವರೆಕೆರೆ ಬಳಿಯಿಂದ ಕುಶಾಲನಗರ ಹಳೆ ಮಾರುಕಟ್ಟೆ ತನಕ ನದಿಗೆ ಎರಡೂ ಕಡೆಗಳಲ್ಲಿ ತಡೆಗೋಡೆ ನಿರ್ಮಿಸುವ ಮೂಲಕ ಪ್ರವಾಹ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವುದು. ನದಿ ತಟಗಳ ಒತ್ತುವರಿಯನ್ನು ತೆರವುಗೊಳಿಸಿ ಅದರ ಅಭಿವೃದ್ಧಿ ನಡೆಸುವ ಮೂಲಕ ಪ್ರವಾಸೋದ್ಯಮಕ್ಕೆ ಕ್ರಿಯಾಯೋಜನೆ ರೂಪಿಸುವುದು.
ಕುಶಾಲನಗರ ಕಾವೇರಿ ನಿಸರ್ಗಧಾಮ ಮತ್ತು ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಾಣಿಜ್ಯ ಕಟ್ಟಡಗಳಿಂದ ಹೊರಸೂಸುವ ತ್ಯಾಜ್ಯಗಳು ನೇರವಾಗಿ ನದಿ ಸೇರುತ್ತಿದ್ದು ಇದಕ್ಕೆ ಕಡಿವಾಣ ಹಾಕುವುದು.
ಗ್ರಾಮಪಂಚಾಯ್ತಿಗಳು ಮಾಂಸದಂಗಡಿಗಳನ್ನು ನದಿ ತಟದಿಂದ ನಿಯಮಾನುಸಾರ ದೂರದಲ್ಲಿ ಇಟ್ಟು ವ್ಯಾಪಾರ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡುವುದು. ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಯನ್ನು ನಿರ್ಬಂಧಿಸಿ ಕ್ರಮಕೈಗೊಳ್ಳುವುದು. ಅವಶ್ಯವಿದ್ದ ಕಡೆ ನದಿ ತಟಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸುವುದು.
ಕೂಡಿಗೆ ಹಾಲಿನ ಡೇರಿಯಿಂದ ನೇರವಾಗಿ ನದಿಗೆ ಕಲುಷಿತ ನೀರು ಹರಿಯದಂತೆ ಎಚ್ಚರವಹಿಸುವುದು. ಧಾರ್ಮಿಕ ಕೇಂದ್ರಗಳು, ಶೈಕ್ಷಣಿಕ ಕೇಂದ್ರಗಳಿಂದ ನದಿಗೆ ನೇರವಾಗಿ ತ್ಯಾಜ್ಯ ಸೇರುವುದನ್ನು ತಪ್ಪಿಸಲು ಯೋಜನೆ ರೂಪಿಸಿವುದು.
ಹೆಬ್ಬಾಲೆ ಮತ್ತು ಶಿರಂಗಾಲ, ಕುಶಾಲನಗರ ಸಮೀಪದ ಕೊಪ್ಪ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಶುಂಠಿ ತೊಳೆಯುವ ಘಟಕಗಳನ್ನು ತೆರವುಗೊಳಿಸುವುದು.
ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ನದಿ ತಟಗಳಲ್ಲಿ ಇರುವ ಕಟ್ಟಡಗಳನ್ನು ತೆರವುಗೊಳಿಸಿ ಅರಣ್ಯ ಇಲಾಖೆಯಿಂದ ಗಿಡಮರಗಳನ್ನು ನೆಡುವ ಯೋಜನೆ ರೂಪಿಸುವುದು. ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳುವ ತನಕ ನದಿಗೆ ತ್ಯಾಜ್ಯಗಳು ನೇರವಾಗಿ ಸೇರದಂತೆ ತಾತ್ಕಾಲಿಕವಾಗಿ ಇಂಗುಗುಂಡಿಯ ನಿರ್ಮಾಣ ಮತ್ತು ಅನುಷ್ಠಾನಗೊಳಿಸುವುದು. ಕುಶಾಲನಗರ ಒಳಚರಂಡಿ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದು. ಅಲ್ಲದೆ ಪ್ರತಿ ವಾಣಿಜ್ಯ ಕೇಂದ್ರಗಳ ಕಟ್ಟಡದಿಂದ ಹೊರಸೂಸುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಕಟ್ಟಡ ಮಾಲೀಕರ ಮೂಲಕವೇ ತ್ಯಾಜ್ಯ ಶುದ್ಧೀಕರಣ ಘಟಕ ನಿರ್ಮಾಣ ಕಡ್ಡಾಯಗೊಳಿಸುವುದು. ಈ ಮೂಲಕ ಸ್ವಚ್ಚ ಕಾವೇರಿ ನಿರ್ಮಾಣ ಸಾಧ್ಯ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕಾವೇರಿ ನದಿ ಸಂರಕ್ಷಣೆಗಾಗಿ ಸರಕಾರದ ಮೂಲಕ ಈ ಬಾರಿಯ ಬಜೆಟ್‍ನಲ್ಲಿ ಅನುದಾನ ಕಲ್ಪಿಸುವುದರ ಮೂಲಕ ಹಂತಹಂತವಾಗಿ ಅನುಷ್ಠಾನಗೊಳಿಸಿ ಪವಿತ್ರ ನದಿ ಹಾಗೂ ದಕ್ಷಿಣ ಭಾರತದ ಜೀವನದಿಯಾಗಿರುವ ಕಾವೇರಿ ನದಿಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಮನವಿಯಲ್ಲಿ ಕೋರಲಾಗಿದೆ ಎಂದು ಕಾವೇರಿ ನದಿ ಸ್ವಚ್ಚತಾ ಆಂದೋಲನ ಮತ್ತು ಕಾವೇರಿ ರಿವರ್ ಸೇವಾ ಟ್ರಸ್ಟ್ ಅಧ್ಯಕ್ಷರಾದ ಎಂ.ಎನ್.ಚಂದ್ರಮೋಹನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಕೊಡಗು ಜಿಲ್ಲಾ ಶಾಸಕರುಗಳಾದ ಎಂ.ಪಿ.ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್, ಸಂಸದ ಪ್ರತಾಪ್‍ಸಿಂಹ ಅವರಿಗೆ ಮನವಿ ಪತ್ರ ಸಲ್ಲಿಸಿದ್ದು ಜನವರಿ ಅಂತ್ಯದಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಿ ಮುಂದಿನ ಬಜೆಟ್‍ನಲ್ಲಿ ಅನುದಾನ ಮೀಸಲಿರಿಸುವಂತೆ ಕ್ರಮಕೈಗೊಳ್ಳಲು ಕೋರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮನವಿ ಸಲ್ಲಿಕೆ ಸಂದರ್ಭ ಸಮಿತಿ ಪ್ರಮುಖರಾದ ಡಿ.ಆರ್.ಸೋಮಶೇಖರ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಕೆ.ಜಿ.ಮನು, ಕೆ.ಆರ್.ಶಿವಾನಂದನ್, ಭಾಸ್ಕರ್ ನಾಯಕ್ ಹಾಜರಿದ್ದರು.

error: Content is protected !!