ಕೃಷಿ ಕಾಯ್ದೆ ಹಿಂಪಡೆಯಲು ಕಾಂಗ್ರೆಸ್ ಆಗ್ರಹ : ಜ.20 ರಂದು ರಾಜಭವನಕ್ಕೆ ಮುತ್ತಿಗೆ

January 16, 2021


ಮಡಿಕೇರಿ ಜ. 16 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕರಾಳ ಕಾಯ್ದೆಗಳನ್ನು ಶೀಘ್ರ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ, ತೈಲ ಬೆಲೆಯ ನಿಯಂತ್ರಣಕ್ಕೆ ಒತ್ತಾಯಿಸಿ, ಡೆಲ್ಲಿಯಲ್ಲಿನ ರೈತರ ಸುದೀರ್ಘ ಹೋರಾಟವನ್ನು ಬೆಂಬಲಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಜ.20 ರಂದು ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಮತ್ತು ‘ರಾಜಭವನ ಮುತ್ತಿಗೆ’ ಹೋರಾಟ ನಡೆಯಲಿದೆಯೆಂದು ಲೋಕಸಭಾ ಮಾಜಿ ಸದಸ್ಯರು ಹಾಗೂ ಕೆಪಿಸಿಸಿ ರೈತ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಧ್ರುವನಾರಾಯಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಿಂದ ರಾಜಭವನದವರೆಗೆ ರೈತ ಪರ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ರೈತಪರ ಸಂಘಟನೆಗಳು ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳು ಬೆಂಬಲಿಸುವಂತೆ ಮನವಿ ಮಾಡಿದರು.
ಡೆಲ್ಲಿಯಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರೈತರು ನಿರಂತರ ಪ್ರತಿಭಟನೆಯಲ್ಲಿ ತೊಡಗಿದ್ದು, ಸುಮಾರು 60 ಮಂದಿ ರೈತರು ಸಾವನ್ನಪ್ಪಿದ್ದಾರೆ, ಇಂತಹ ಸಂದರ್ಭ ಕನಿಷ್ಟ ಮಾನವೀಯ ದೃಷ್ಟಿಯಿಂದಲೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರೊಂದಿಗೆ ಮಾತುಕತೆ ನಡೆಸುವ ಪ್ರಯತ್ನಕ್ಕೆ ಮುಂದಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ರೈತ ವಿರೋಧಿ ಯಾವುದೇ ಕಾಯ್ದೆಗಳನ್ನು ಜಾರಿಗೆ ತರುವ ಮೊದಲು ಸಂಸತ್ತಿನಲ್ಲಿ ಚರ್ಚಿಸಿ, ರೈತಮುಖಂಡರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿತ್ತು. ಆದರೆ ಯಾವುದೇ ಚರ್ಚೆಗಳಿಗೆ ಅವಕಾಶ ನೀಡದೆ ಏಕಾಏಕಿ ಕಾಯ್ದೆಯನ್ನು ಜಾರಿಗೊಳಿಸಿರುವುದು ಖಂಡನೀಯ. ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿಗಳ ಶಕ್ತಿ ಕುಂದಲಿದೆ. ಸರ್ಕಾರಗಳು ಸರ್ಕಾರಿ ಸಂಸ್ಥೆಗಳ ಬಲವರ್ಧನೆಗೆ ಮುಂದಾಗಬೇಕೇ ಹೊರತು ಅದನ್ನು ಶಕ್ತಿ ಹೀನ ಮಾಡುವ ಪ್ರಯತ್ನಕ್ಕೆ ಮುಂದಾಗಬಾರದೆಂದು ತಿಳಿಸಿದರು.
ಈ ಹಿಂದೆ ನರೇಂದ್ರ ಮೋದಿಯವರು ಮುಖ್ಯ ಮಂತ್ರಿಯಾಗಿದ್ದಾಗ ಕನಿಷ್ಟ ಬೆಂಬಲ ಬೆಲೆ (ಎಂಎಸ್‍ಪಿ) ಯನ್ನು ಶಾಸನಬದ್ಧಗೊಳಿಸಬೇಕೆಂದು ಆಗ್ರಹಿಸಿದ್ದರು. ಅದೇ ಅವರು ಪ್ರಧಾನ ಮಂತ್ರಿಗಳಾಗಿ ಕಾಯ್ದೆ ರೂಪಿಸುವ ಸಂದರ್ಭ ಈ ವಿಚಾರವನ್ನೆ ಪ್ರಸ್ತಾಪಿಸುತ್ತಿಲ್ಲವೆಂದು ಕಟುವಾಗಿ ನುಡಿದ ಧ್ರುವನಾರಾಯಣ್, ಪ್ರಸ್ತುತ ಕನಿಷ್ಟ ಬೆಂಬಲ ಬೆಲೆ ಮುಂದುವರೆಯುವ ಯಾವುದೇ ವಿಶ್ವಾಸವಿಲ್ಲವೆಂದು ತಿಳಿಸಿ, ಕೃಷಿ ಕಾಯ್ದೆಯ ಜಾರಿಯ ಹಂತದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೇಲೆ (ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಂ) ಬಗ್ಗೆ ಕೇಂದ್ರ ಬೆಳಕು ಚೆಲ್ಲುವ ಅಗತ್ಯವಿತ್ತು.ಕೇಂದ್ರ ಸಚಿವರಾಗಿದ್ದ ಅರುಣ್ ಜೆಟ್ಲಿ, ಸುಷ್ಮ ಸ್ವರಾಜ್ ಅವರುಗಳು ಸಂಸತ್‍ನಲ್ಲಿ ಕನಿಷ್ಟ ಬೆಂಬಲ ಬೆಲೆಯನ್ನು ಶಾಸನ ಬದ್ಧವಾಗಿ ರೂಪಿಸುವ ಬಗ್ಗೆ ಹಿಂದೆ ಪ್ರಸ್ತಾಪಿಸಿದ್ದುದನ್ನು ಧ್ರುವನಾರಾಯಣ್ ಉಲ್ಲೇಖಿಸಿದರು.
ಕೃಷಿ ಕಾಯ್ದೆಗಳ ವಿರುದ್ಧ ದೇಶವ್ಯಾಪ್ತಿ ಹೋರಾಟಗಳು ನಡೆಯುತ್ತಿದ್ದು, ಎನ್‍ಡಿಎ ಅಂಗಪಕ್ಷವಾಗಿದ್ದ ಅಕಾಲಿ ದಳ ಕೂಡ ಪ್ರತಿಭಟನೆಯನ್ನು ಬೆಂಬಲಿಸಿದೆ. ಕೇಂದ್ರ ಸರ್ಕಾರ ದೊಡ್ಡ ಉದ್ದಿಮೆಗಳಿಗಷ್ಟೆ ಅನುಕೂಲತೆ ಕಲ್ಪಿಸುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಲೇ ಬೇಕು. ಕಾಂಗ್ರೆಸ್ ಈ ಹೋರಾಟದ ಕೊನೆಯವರೆಗೂ ರೈತರ ಜೊತೆಯಲ್ಲಿ ಇರಲಿದೆಯೆಂದು ಧ್ರುವನಾರಾಯಣ್ ಸ್ಪಷ್ಟಪಡಿಸಿದರು.
ತೈಲ ಬೆಲೆ ವಿಶ್ವದಲ್ಲೆ ಅತೀ ಹೆಚ್ಚು-ವಿಶ್ವದಲ್ಲೆ ಅತೀ ಹೆಚ್ಚಿನ ತೈಲ ಬೆಲೆ ಭಾರತಲ್ಲಿದೆ. ಪ್ರತಿ ಲೀಟರ್ ತೈಲಕ್ಕೆ ಶೇ. 70 ರಷ್ಟು ವಿವಿಧ ತೆರಿಗೆಯನ್ನು ಗ್ರಾಹಕ ನೀಡುವ ಪರಿಸ್ಥಿತಿ ಇದೆ. ಇದೇ ರೀತಿ ಅಡುಗೆ ಅನಿಲದ ಬೆಲೆಯೂ ಗಗನಕ್ಕೇರಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಕಚ್ಚಾ ತೈಲದ ಬೆಲೆ ಬ್ಯಾರಲ್‍ಗೆ 110 ಡಾಲರ್ ಇದ್ದರೂ ತೈಲ ಬೆಲೆ ನಿಯಂತ್ರಣದಲ್ಲಿತ್ತು. ಪ್ರಸ್ತುತ ಕಚ್ಚಾ ತೈಲದ ಬೆಲೆ 50 ಡಾಲರ್ ಆಸು ಪಾಸಿನಲ್ಲಿದ್ದು, ತೈಲ ಬೆಲೆಯನ್ನು ಗ್ರಾಹಕರಿಗೆ ಅನುಕೂಲವಾಗುವಂತೆ ಇಳಿಸಬಹುದೆಂದು ಅಭಿಪ್ರಾಯಿಸಿದರು.
ಸಿಡಿ ವಿವಾದದ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ- ಇದೇ ಸಂದರ್ಭ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಧ್ರುವನಾರಾಯಣ್, ರಾಜ್ಯ ರಾಜಕೀಯದಲ್ಲಿ ಕೇಳಿಬರುತ್ತಿರುವ ಸಿಡಿ ವಿಚಾರದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಮತ್ತು ಪಕ್ಷದ ಪ್ರಮುಖರಾದ ಸಿದ್ಧರಾಮಯ್ಯ ಅವರು ಮಾಡಿರುವ ಆಗ್ರಹದಂತೆ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಸಿಡಿ ವಿಚಾರದ ಬಗ್ಗೆ ಕಾಂಗ್ರೆಸ್ ಅಲ್ಲ ಆಡಳಿತ ಪಕ್ಷದವರೇ ಪ್ರಸ್ತಾಪಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಯತ್ನಾಳ್, ಮಾಜಿ ಸಂಸದ ವಿಶ್ವನಾಥ್ ಅವರೇ ಹೇಳಿಕೆ ನೀಡಿದ್ದಾರೆ.ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು ಸುಮ್ಮನೆ ಈ ರೀತಿ ಹೇಳಿಕೆ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಯುವುದು ಉಚಿತವೆಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯರಾದ ಟಿ.ಪಿ.ರಮೇಶ್, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಸುಳ್ಯ ಬ್ಲಾಕ್ ಸಂಯೋಜಕ ಹೆಚ್.ಎಂ. ನಂದಕುಮಾರ್, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಈ.ಮ್ಯಾಥ್ಯು ಉಪಸ್ಥಿತರಿದ್ದರು.

error: Content is protected !!