ಶಾಂತಳ್ಳಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಕುಮಾರಲಿಂಗೇಶ್ವರ ರಥೋತ್ಸವ

January 16, 2021

ಮಡಿಕೇರಿ ಜ. 26 : ಶಾಂತಳ್ಳಿಯ ಕುಮಾರಲಿಂಗೇಶ್ವರಸ್ವಾಮಿ ದೇವಾಲಯದ ಜಾತ್ರೋತ್ಸವವು ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಜೈಕಾರದೊಂದಿಗೆ ಮಹಾರಥವನ್ನು ಗ್ರಾಮಸ್ಥರು ರಥ ಬೀದಿಯಲ್ಲಿ ಶ್ರದ್ಧಾಭಕ್ತಿಯಿಂದ ಎಳೆದರು.

ಇದಕ್ಕೂ ಮೊದಲು ಕುಮಾರಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಕೂರಿಸಿ, ಮೆರವಣಿಗೆಯಲ್ಲಿ ತಂದು ಮಹಾರಥದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು. ನಂತರ ದೇವಾಲಯದ ಧರ್ಮದರ್ಶಿ ಮಂಡಳಿ ಹಾಗೂ ನೂರಾರು ಮಂದಿ ರಥವನ್ನು ಎಳೆದರು. ಸಾವಿರಾರು ಮಂದಿ ಉತ್ಸವವನ್ನು ಕಣ್ತುಂಬಿಕೊಂಡರು. ಕೋವಿಡ್-19 ಸೋಂಕು ಹರಡುವ ಹಿನ್ನಲೆಯಲ್ಲಿ ಧರ್ಮದರ್ಶಿ ಮಂಡಳಿಯವರು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಸರಳವಾಗಿ ಕಾರ್ಯಕ್ರಮಗಳು ನಡೆದವು.

ಜ.13ರ ಬೆಳ್ಳಿ ಬಂಗಾರ ದಿನದಂದು ಪ್ರಾರ್ಥನಾ ಪೂಜೆಯೊಂದಿಗೆ ಪ್ರಾರಂಭಗೊಂಡು ಕರುವಿನ ಹಬ್ಬ, ಗರುಡಗಂಬದಲ್ಲಿ ತುಪ್ಪದ ನಂದಾದೀಪ ಬೆಳಗುವದು, ಪುಷ್ಪಗಿರಿ ಬೆಟ್ಟದಲ್ಲಿರುವ ಪುರಾತನ ದೇವಾಲಯದಲ್ಲಿ ದೀಪೋತ್ಸವ, ಅರಸುಬಲ ಸೇವೆ ಸೇರಿದಂತೆ ಪ್ರತಿದಿನ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು.

ವೇದಮೂರ್ತಿ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ದೇವಾಲಯದ ಪ್ರಧಾನ ಅರ್ಚಕ ರಮೇಶ್ ಹೆಗಡೆ ನೇತೃತ್ವದ ತಂಡದವರಿಂದ ಬೆಳಗ್ಗಿನಿಂದಲೇ ಪೂಜಾ ವಿಧಿ ವಿಧಾನಗಳು ನಡೆದವು. ಕೂತಿ ನಾಡು, ತೋಳುನಾಡು, ಪುಷ್ಪಗಿರಿ, ಯಡೂರು, ತಲ್ತರೆಶೆಟ್ಟಳ್ಳಿ ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ರಥೋತ್ಸವ ಸಂದರ್ಭ ಶಾಂತಳ್ಳಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಮಧುಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಧರ್ಮದರ್ಶಿ ಮಂಡಳಿ ಉಪಾಧ್ಯಕ್ಷ ಜಿ.ಡಿ.ಬಸವರಾಜು, ಕಾರ್ಯದರ್ಶಿ ಕೆ.ಎಸ್.ಸುಂದರ್, ಸಹ ಕಾರ್ಯದರ್ಶಿ ಎಸ್.ಆರ್.ಉತ್ತಯ್ಯ, ಖಜಾಂಚಿ ಕೆ.ಕೆ.ಮುತ್ತಣ್ಣ ಸೇರಿದಂತೆ ಹಿರಿಯರು ಇತರರು ಇದ್ದರು.

ಜ.17ರಂದು (ಇಂದು) ಮಹಾ ಸಂಪ್ರೋಕ್ಷಣೆ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾಮಂಗಳಾರತಿ ನಂತರ ಮಂಗಳ ಪ್ರಾರ್ಥನೆ ನಡೆಯುವ ಮೂಲಕ ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ತೆರೆಬೀಳಲಿದೆ ಎಂದು ಅಧ್ಯಕ್ಷ ಕೆ.ಎಂ.ಲೋಕೇಶ್ ಹೇಳಿದರು. ಜಾತ್ರೋತ್ಸವದ ಅಂಗವಾಗಿ ತಾಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ರೈತರು ಬೆಳೆದ ಬೆಳೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

error: Content is protected !!