ಕೊಡಗಿನಲ್ಲಿ ‘ಕೋವಿಡ್ ಲಸಿಕೆ’ ಅಭಿಯಾನ ಆರಂಭ : ಪೌರ ಕಾರ್ಮಿಕರಾದ ಪೊನ್ನಮ್ಮರಿಗೆ ಪ್ರಥಮ ಲಸಿಕೆ

January 16, 2021

ಮಡಿಕೇರಿ ಜ. 16 : ಇಡೀ ವಿಶ್ವವನ್ನೆ ನಡುಗಿಸಿರುವ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ಪೂರಕವಾಗಿ ‘ಕೋವಿಡ್ ಲಸಿಕೆ’ ಅಭಿಯಾನ ಇಂದಿನಿಂದ ದೇಶದಾದ್ಯಂತ ಆರಂಭಗೊಂಡಿದ್ದು, ಕೊಡಗು ಜಿಲ್ಲೆಯ ಐದು ಕೇಂದ್ರಗಳಲ್ಲಿ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪೌರಡಳಿತ ಇಲಾಖೆಯ ನಾಲ್ಕನೇ ದರ್ಜೆ ಸಿಬ್ಬಂದಿ ಪೆÇನ್ನಮ್ಮ ಅವರಿಗೆ ಮೊದಲ ಲಸಿಕೆ ನೀಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಈ ಸಂದರ್ಭ ಶಾಸಕರಾದ ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ಪ್ರಭಾರ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ ಮೊದಲಾದವರಿದ್ದರು.
ಜಿಲ್ಲೆಗೆ ಈಗಾಗಲೆ 4 ಸಾವಿರ ಕೋವಿಡ್ ಲಸಿಕೆ ತಲುಪಿದೆ. ಜಿಲ್ಲಾ ಕೇಂದ್ರ ಮಡಿಕೇರಿಯ ಜಿಲ್ಲಾ ಆಸ್ಪತ್ರೆ ಮತ್ತು ಸಂತ ಮೈಕೆಲರ ಶಾಲೆ, ಸೋಮವಾರಪೇಟೆಯ ತಾಲ್ಲೂಕು ಆಸ್ಪತ್ರೆ, ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 100 ಮಂದಿಗೆ ಹಾಗೂ ಕಾಕೋಟುಪರಂಬು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 74 ಸೇರಿದಂತೆ ಒಟ್ಟು 474 ಮಂದಿಗೆ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಮೊದ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 6,560 ಕೊರೊನಾ ವಾರಿಯರ್ಸ್‍ನ್ನು ಗುರುತಿಸಲಾಗಿದೆಯೆಂದು ತಿಳಿಸಿದರು.

error: Content is protected !!