18 ವರ್ಷ ಮೇಲ್ಪಟ್ಟವರಿಗೆ ಮತದಾರರ ಗುರುತಿನ ಚೀಟಿ ನೀಡಿ: ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್

January 16, 2021

ಮಡಿಕೇರಿ ಜ.16 :18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರಿಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿ ಮತದಾರರ ಗುರುತಿನ ಚೀಟಿ ನೀಡಬೇಕು. 18 ವರ್ಷ ಪೂರ್ಣಗೊಂಡವರಿಗೆ ಮತದಾರರ ಪಟ್ಟಿಯಲ್ಲಿ ಕಡ್ಡಾಯವಾಗಿ ಹೆಸರು ಸೇರ್ಪಡೆ ಮಾಡಬೇಕು. ಆ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಿಸುವಂತೆ ಅಪರ ಮುಖ್ಯ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅವರು ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ಮಾಹಿತಿ ಪಡೆದು ಅವರು ಮಾತನಾಡಿದರು.
ಜಿಲ್ಲೆಯಲ್ಲಿ 4,423 ಮಂದಿ ಹೊಸ ಮತದಾರರನ್ನು ಗುರುತಿಸಲಾಗಿದೆ. 18 ವರ್ಷ ಪೂರ್ಣಗೊಂಡವರು ಇನ್ನೂ ಸಹ ಇದ್ದು, ಅಂತವರನ್ನು ಗುರುತಿಸಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಅವರು ನಿರ್ದೇಶನ ನೀಡಿದರು.
ಮತದಾರರ ಪಟ್ಟಿಯಿಂದ ಹೊರ ತೆಗೆಯುವಾಗ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲಿಸುವಂತೆ ಅಪರ ಮುಖ್ಯ ಚುನಾವಣಾಧಿಕಾರಿ ಅವರು ಸೂಚಿಸಿದರು.
ಚುನಾವಣಾ ಗುರುತಿನ ಚೀಟಿ ಪಡೆದವರು ಆಕಸ್ಮಿಕವಾಗಿ ಗುರುತಿನ ಚೀಟಿ ಕಳೆದುಕೊಂಡಿದ್ದಲ್ಲಿ, ಮತ್ತೊಮ್ಮೆ ಅವರು ಚುನಾವಣಾ ಗುರುತಿನ ಚೀಟಿ ಪಡೆಯಬೇಕಿದ್ದಲ್ಲಿ 30 ರೂ.ವನ್ನು ಪಡೆದು ಚುನಾವಣಾ ಮತದಾರರ ಗುರುತಿನ ಚೀಟಿ ನೀಡಬಹುದಾಗಿದೆ. 30 ರೂ. ಸಂಗ್ರಹಿಸಿದ ಹಣವನ್ನು ಸರ್ಕಾರಕ್ಕೆ ಜಮೆ ಮಾಡಬೇಕು ಎಂದು ಅಪರ ಮುಖ್ಯ ಚುನಾವಣಾಧಿಕಾರಿ ಅವರು ಸೂಚನೆ ನೀಡಿದರು.
ಆಕಸ್ಮಿಕವಾಗಿ ಮರಣ ಹೊಂದಿದ್ದಲ್ಲಿ ಮತದಾರರ ಪಟ್ಟಿಯಿಂದ ಹೊರ ತೆಗೆಯುವ ಸಂದರ್ಭದಲ್ಲಿ ನಿಯಮವನ್ನು ಅನುಸರಿಸಬೇಕು. ವಿಕಲಚೇತನರಿಗೆ ಮತದಾರರ ಗುರುತಿನ ಚೀಟಿ ನೀಡುವಾಗ ನಿಖರ ಮಾಹಿತಿ ಸಂಗ್ರಹಿಸಬೇಕು ಎಂದು ಅವರು ಸೂಚಿಸಿದರು.
ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಸಂದರ್ಭದಲ್ಲಿ ಯಾವುದೇ ನ್ಯೂನತೆಯಿಲ್ಲದಂತೆ ಗಮನಹರಿಸುವಂತೆ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅವರು ನಿರ್ದೇಶನ ನೀಡಿದರು.
ಪ್ರಭಾರ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್, ತಹಶೀಲ್ದಾರ್‍ರಾದ ಗೋವಿಂದರಾಜು(ಸೋಮವಾರಪೇಟೆ), ಮಹೇಶ್(ಮಡಿಕೇರಿ), ಯೋಗಾನಂದ(ವಿರಾಜಪೇಟೆ), ಶಿರಸ್ತೆದಾರರಾದ ಪ್ರಕಾಶ್, ಪ್ರವೀಣ್ ಕುಮಾರ್, ಶ್ರೀನಿವಾಸ್, ಮೋಹಿತ್, ವೆಂಕಟೇಶ್, ಅನಿಲ್ ಕುಮಾರ್, ಸಿನೋಜ್ ಇತರರು ಹಲವು ಮಾಹಿತಿ ನೀಡಿದರು.
ಮತ್ತಷ್ಟು ಮಾಹಿತಿ: ಜಿಲ್ಲೆಯಲ್ಲಿ 5,60,593 ಜನಸಂಖ್ಯೆ ಇದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 2,78,707 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,81,886 ಜನಸಂಖ್ಯೆ ಇದ್ದಾರೆ. ಇದರಲ್ಲಿ 2,74,388 ಪುರುಷರು ಮತ್ತು 2,86,205 ಮಹಿಳೆಯರಿದ್ದಾರೆ.
ಹಾಗೆಯೇ ಜಿಲ್ಲೆಯಲ್ಲಿ ಒಟ್ಟು 4,47,740 ಮತದಾರರು ಇದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,25,431, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,22,309 ಮತದಾರರು ಇದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 18-19 ವರ್ಷದಿಂದ 80 ವರ್ಷ ಮೇಲ್ಪಟ್ಟವರ ಶೇಕಡವಾರು ಮತದಾರರನ್ನು ಗಮನಿಸಿದಾಗ 18-19 ವರ್ಷದ ಶೇ.0.97, 20-29 ವರ್ಷದ ಶೇ.17.73, 30 ರಿಂದ 39 ವರ್ಷದ ಶೇ. 21.69, 40 ರಿಂದ 49 ವರ್ಷದ ಶೇ.20.22, 50 ರಿಂದ 59 ವರ್ಷದ ಶೇ. 16.89, 60-69 ವರ್ಷದ ಶೇ.11.73, 70-79 ವರ್ಷದ ಶೇ.5.99, 80 ಕ್ಕಿಂತ ಹೆಚ್ಚು ವಯಸ್ಸಿನ ಶೇ. 2.51 ರಷ್ಟು ಮತದಾರರು ಇದ್ದು, ಒಟ್ಟಾರೆ ಜಿಲ್ಲೆಯಲ್ಲಿ ಶೇ.97.71 ರಷ್ಟು ಮತದಾರರ ಪಟ್ಟಿಯಲ್ಲಿದ್ದಾರೆ. ಭಾವಚಿತ್ರ ಒಳಗೊಂಡ ಮತದಾರರ ಗುರುತಿನ ಚೀಟಿಯನ್ನು ಶೇ.100 ರಷ್ಟು ಪ್ರಗತಿ ಸಾಧಿಸಲಾಗಿದೆ.
ಜಿಲ್ಲೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 686, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 792 ಒಟ್ಟು 1,478 ಸೇವಾ ಮತದಾರರು ಇದ್ದಾರೆ. ಹಾಗೆಯೇ ವಿಕಲಚೇತನ ಮತದಾರರು ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 1,513 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,329 ಒಟ್ಟು 2,842 ವಿಕಲಚೇತನ ಮತದಾರರು ಇದ್ದಾರೆ. ಹಾಗೆಯೇ 18 ವರ್ಷ ಮೇಲ್ಪಟ್ಟ 4,423 ಮತದಾರರು ಇದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 2,062 ಮತ್ತು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ, 2361 ಮತದಾರರು ಇದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಅವರು ಮಾಹಿತಿ ನೀಡಿದರು.

error: Content is protected !!