ತುಪ್ಪದ ಅನ್ನ, ಗೋಮಾಂಸ ಹಂಚಿಕೆ : ನಾನು ಕ್ಷಮೆ ಕೋರಿಲ್ಲವೆಂದ ಅನಿಲ್ ಅಯ್ಯಪ್ಪ

January 16, 2021

ಮಡಿಕೇರಿ ಜ.16 : ತುಪ್ಪದ ಅನ್ನ ಹಾಗೂ ಗೋಮಾಂಸ ಹಂಚಿಕೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ನೀಡಿರುವ ಹೇಳಿಕೆಯಂತೆ ತಾನು ಕ್ಷಮೆ ಕೋರಿಲ್ಲ ಎಂದು ಸ್ಪಷ್ಟಪಡಿಸಿರುವ ಕಾಕೋಟುಪರಂಬು ಕಾಂಗ್ರೆಸ್ ವಲಯಾಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ, ನನ್ನ ಹೇಳಿಕೆ ಸುಳ್ಳಾದಲ್ಲಿ ರಾಜಕೀಯ ನಿವೃತ್ತ ಘೋಷಿಸುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಕೋಟುಪರಂಬುವಿನಲ್ಲಿ ಬಿಜೆಪಿ ಕಾರ್ಯಕರ್ತರು ತುಪ್ಪದ ಅನ್ನ ಹಾಗೂ ಗೋಮಾಂಸ ಹಂಚಿಕೆ ಮಾಡಿರುವ ಚಿತ್ರಗಳು ನನ್ನ ಬಳಿ ಇದ್ದು, ಈ ಬಗ್ಗೆ ಧ್ವನಿ ಸುರುಳಿಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಯಿತು ಎಂದರು.
ಆದರೆ, ಬಿಜೆಪಿ ಕಾರ್ಯಕರ್ತರು ದೇವಾಲಯಕ್ಕೆ ಬಂದು ಸತ್ಯಮಾಡುವಂತೆ ನನಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ರವಾನಿಸಿದ್ದರು. ಅಲ್ಲಿಗೆ ಒಬ್ಬನೇ ಹೋದಾಗ ನನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದೇನೆ. ಈ ಸಂದರ್ಭ ಗ್ರಾಮದ ಹಿರಿಯರು, ಇದನ್ನು ಬಗೆಹರಿಸಿಕೊಂಡು ಮುಂದಿನ ದಿನಗಳಲ್ಲಿ ಯಾವುದೇ ಪರ ವಿರೋಧದ ಹೇಳಿಕೆ ನೀಡದಂತೆ ಮನವೊಲಿಸಿದ್ದರು ಎಂದು ಅನಿಲ್ ಅಯ್ಯಪ್ಪ ಸ್ಪಷ್ಟಪಡಿಸಿದರು.
ಈ ಎಲ್ಲಾ ಬೆಳವಣಿಗೆಯ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿ, ನಾನು ತಪ್ಪು ಒಪ್ಪಿಕೊಂಡಿರುವುದಾಗಿ ಹೇಳಿಕೆ ನೀಡಿದ್ದು, ಅವರು ಮಾಡಿದ ತಪ್ಪುಗಳನ್ನು ಮರೆಮಾಚಲು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆಗೆ ಸಿದ್ಧನಿರುವುದಾಗಿ ತಿಳಿಸಿದ ಅನಿಲ್ ಅಯ್ಯಪ್ಪ, ನನ್ನ ಮಾತಿನಲ್ಲಿ ತಪ್ಪಿದ್ದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಕೋಟುಪರಂಬು ಕಾಂಗ್ರೆಸ್ ಪ್ರಮುಖರಾದ ಪೊಕ್ಕುಳಂಡ್ರ ಕೌಶನ್, ತೋರೆರ ಸುಬ್ಬಯ್ಯ, ಮಂಡೇಟಿರ ಪ್ರವೀಣ್ ಉಪಸ್ಥಿತರಿದ್ದರು.