ಕೊಡಗಿಗೆ ಸಚಿವ ಸ್ಥಾನ ನೀಡಲು ಹರೀಶ್ ಜಿ.ಆಚಾರ್ಯ ಒತ್ತಾಯ

January 17, 2021

ಮಡಿಕೇರಿ ಜ.15 : ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನೀಡುವ ಮೂಲಕ ಸ್ಥಳೀಯ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಪೂರಕವಾದ ವಾತಾವರಣವನ್ನು ರಾಜ್ಯ ಸರ್ಕಾರ ಸೃಷ್ಟಿಸಬೇಕೆಂದು ಪೀಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್ ರೈಟ್ಸ್ ನ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗಿನವರೇ ಜಿಲ್ಲಾ ಉಸ್ತುವಾರಿ ಸಚಿವರಾದಾಗ ಮಾತ್ರ ಇಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲು ಸಾಧ್ಯವೆಂದು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ವ್ಯಾಪಿ ಜಾತಿ ಆಧಾರÀದಲ್ಲಿ, ಮಠ, ಮಂದಿರಗಳ ಹೆಸರಿನಲ್ಲಿ ಸಚಿವಗಿರಿಗಾಗಿ ಲಾಬಿ ನಡೆಯುತ್ತಿದೆ. ಸರ್ಕಾರ ಕೂಡ ಒತ್ತಡಕ್ಕೆ ಮಣಿಯುತ್ತಿದ್ದು, ಸ್ವಾಭಿಮಾನಿ ಗುಣದ ಕೊಡಗನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ ಎಂದು ಟೀಕಿಸಿದ್ದಾರೆ.
ಬಹಳ ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಮೂರು ಮಂತ್ರಿ ಸ್ಥಾನಗಳನ್ನು ನೀಡಲಾಗಿತ್ತು. ಆದರೆ ಕಳೆದ 20 ವರ್ಷಗಳಿಂದ ಬಿಜೆಪಿಯನ್ನೇ ಪೋಷಿಸುತ್ತಾ ಬಂದಿರುವ ಕೊಡಗು ಜಿಲ್ಲೆಗೆ ಬಿಜೆಪಿ ಸರ್ಕಾರದಿಂದಲೇ ಅನ್ಯಾಯವಾಗಿದೆ. ಸತತವಾಗಿ ಜನಮನ್ನಣೆ ಗಳಿಸುತ್ತಾ ಗೆಲುವು ಸಾಧಿಸುತ್ತಲೇ ಬರುತ್ತಿರುವ ಶಾಸಕರುಗಳ ಮೇಲಿನ ನಿರ್ಲಕ್ಷ್ಯ ಜಿಲ್ಲೆಯ ಮತದಾರರನ್ನು ಅವಮಾನಿಸಿದಂತೆ ಎಂದು ಹರೀಶ್ ಜಿ.ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ.
ತಕ್ಷಣ ಸರ್ಕಾರ ಎಚ್ಚೆತ್ತುಕೊಂಡು ಕರ್ತವ್ಯ ನಿರ್ವಹಿಸದ ಸಚಿವರÀನ್ನು ಸಂಪುಟದಿಂದ ಕೈಬಿಟ್ಟು ಕೊಡಗಿನ ಒಬ್ಬರು ಶಾಸಕರಿಗಾದರೂ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹೊರ ಜಿಲ್ಲೆಯ ಸಚಿವರುಗಳೇ ಕೊಡಗಿನ ಉಸ್ತುವಾರಿ ಸಚಿವರುಗಳಾಗುತ್ತಿದ್ದು, ಇದರಿಂದ ಜಿಲ್ಲೆಗೆ ಮತ್ತು ಇಲ್ಲಿನ ಜನರಿಗೆ ಯಾವುದೇ ಲಾಭವಾಗುತ್ತಿಲ್ಲ. ಕಳೆದ ಅನೇಕ ವರ್ಷಗಳಿಂದ ಹಲವು ಸಮಸ್ಯೆಗಳು ಬಗೆ ಹರಿಯದೆ ಹಾಗೇ ಉಳಿದುಕೊಂಡಿದೆ. ಇತರ ಜಿಲ್ಲೆಗಳ ಸಚಿವರುಗಳಿಗೆ ಇಲ್ಲಿನ ಸಮಸ್ಯೆಗಳು ಅರ್ಥವಾಗುತ್ತಿಲ್ಲ ಮತ್ತು ಸಮಸ್ಯೆಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನಗಳಾಗುತ್ತಿಲ್ಲ. ಉಸ್ತುವಾರಿಗಳು ಬರುತ್ತಾರೆ, ಹೋಗುತ್ತಾರೆ ಎನ್ನುವ ದಿನಚರಿ ನಡೆಯುತ್ತಿದೆಯೇ ಹೊರತು ಯಾವುದೇ ಸಮಸ್ಯೆಗಳು ಬಗೆ ಹರಿಯುತ್ತಿಲ್ಲ. ಜನಸಾಮಾನ್ಯರಿಗೆ ಸುಲಭವಾಗಿ ಸಿಗುತ್ತಿಲ್ಲ, ಬೆಂಗಳೂರಿಗೆ ತೆರಳಿ ಉಸ್ತುವಾರಿ ಸಚಿವರುಗಳನ್ನು ಭೇಟಿಯಾಗಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಆದ್ದರಿಂದ ಕೊಡಗಿನವರೇ ಉಸ್ತುವಾರಿ ಸಚಿವರಾದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರೆತು ಅಭಿವೃದ್ಧಿ ಕಾರ್ಯಗಳು ಚುರುಕು ಪಡೆದುಕೊಳ್ಳಲಿದೆ ಎಂದು ಹರೀಶ್ ಜಿ.ಆಚಾರ್ಯ ಹೇಳಿದ್ದಾರೆ.
ಪ್ರಾಕೃತಿಕ ವಿಕೋಪ ಪರಿಹಾರ ಕಾರ್ಯ, ವನ್ಯಜೀವಿಗಳ ಉಪಟಳ, ಅರಣ್ಯ ಮತ್ತು ಕಂದಾಯ ಇಲಾಖೆಯ ಸಮಸ್ಯೆಗಳು, ರೈತರು ಹಾಗೂ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆಗೆ ಅನುಕೂಲವಾಗಲಿದೆ. ಜನಸಾಮಾನ್ಯರಿಗೂ ಇಲ್ಲಿನ ಸಚಿವರು ಸುಲಭವಾಗಿ ಸಿಗುವುದರಿಂದ ಅರ್ಜಿಗಳ ವಿಲೇವಾರಿಯೂ ಶೀಘ್ರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

error: Content is protected !!