ಫೆ.6ರಂದು ಜನರಲ್ ತಿಮ್ಮಯ್ಯ ಮ್ಯೂಸಿಯಂ ರಾಷ್ಟ್ರಪತಿಗಳಿಂದ ಉದ್ಘಾಟನೆ

January 17, 2021

ಮಡಿಕೇರಿ ಜ.17 : ಭಾರತೀಯ ಸೇನೆಯಲ್ಲಿ ಅಪ್ರತಿಮ ಸಾಧನೆ ತೋರುವುದರೊಂದಿಗೆ ಪುಟ್ಟ ಜಿಲ್ಲೆ ಕೊಡಗಿನ ಕೀರ್ತಿಯನ್ನು ದೇಶ-ವಿದೇಶಗಳಿಗೆ ಹಬ್ಬಿಸಿದ ಜನರಲ್ ತಿಮ್ಮಯ್ಯ ಅವರು ಜನಿಸಿದ ಮನೆ ‘ಸನ್ನಿಸೈಡ್’ ನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದು ಫೆ.6ರಂದು ಲೋಕಾರ್ಪಣೆಗೊಳ್ಳಲಿದೆ.
ಮ್ಯೂಸಿಯಂ ಉದ್ಘಾಟನೆಗೆ ಸ್ವತಃ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರೇ ಕೊಡಗಿಗೆ ಆಗಮಿಸಲಿದ್ದು, ಅಂದು ಅಪರಾಹ್ನ 3.15ರಿಂದ 4 ಗಂಟೆಯವರೆಗೆ ಕಾರ್ಯಕ್ರಮ ನಿಗದಿಯಾಗಿದೆ.
ತಿಮ್ಮಯ್ಯ ಅವರು ಹುಟ್ಟಿದ ಮನೆ ಸನ್ನಿ ಸೈಡ್'ನಲ್ಲಿ ಜನರಲ್ ತಿಮ್ಮಯ್ಯ ಮ್ಯೂಸಿಯಂ ನಿರ್ಮಾಣವಾಗಿದ್ದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕೆ.ಸಿ. ಸುಬ್ಬಯ್ಯ ಅವರ ಆಹ್ವಾನದ ಮೇರೆಗೆ ಮ್ಯೂಸಿಯಂ ಉದ್ಘಾಟನೆಗೆ ರಾಷ್ಟ್ರಪತಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ದೇಶದ ರಕ್ಷಣಾ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಕರ್ನಾಟಕದ ಪುಟ್ಟ ಜಿಲ್ಲೆ ಕೊಡಗು ದೇಶದಲ್ಲಿ ಮತ್ತೊಮ್ಮೆ ಗಮನ ಸೆಳೆಯಲಿದೆ. ಅಪ್ರತಿಮ ಸೇನಾನಿ ಪದ್ಮಭೂಷಣ ಖ್ಯಾತಿಯ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಸೇನಾ ಬದುಕಿನ ಐತಿಹ್ಯ ಅವರ ಸಾಧನೆ ಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ 2006ರ ಬಜೆಟ್‍ನಲ್ಲಿಸನ್ನಿಸೈಡ್’ ನಿವಾಸವನ್ನು ತಿಮ್ಮಯ್ಯ ಸ್ಮಾರಕ ಭವನವನ್ನಾಗಿ ಪರಿವರ್ತಿಸುವ ಯೋಜನೆಯನ್ನು ಪ್ರಕಟಿಸಿತ್ತು.
ಆದರೆ ಆ ಸಂದರ್ಭ ಈ ಜಾಗ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧೀನದಲ್ಲಿತ್ತು. ಈ ಇಲಾಖೆಯಿಂದ ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಾಪಾಸ್ಸು ಪಡೆಯುವುದೂ ಸೇರಿದಂತೆ ಅನುದಾನ ಬಿಡುಗಡೆಯಲ್ಲಿ ವಿಳಂಬ, ಆಡಳಿತಾತ್ಮಕ ವಿಚಾರ ನಂತರದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತಿತರ ಕಾರಣಗಳಿಂದಾಗಿ ಈ ಯೋಜನೆ ಕಾರ್ಯಗತವಾಗಲು 15 ವರ್ಷಗಳೇ ಹಿಡಿದಿವೆ.
ಈ ನಡುವೆ ಫೀ.ಮಾ. ಕಾರ್ಯಪ್ಪ-ಜನರಲ್ ತಿಮ್ಮಯ್ಯ ಫೋರಂನ ಪ್ರಮುಖರು ಸಾಕಷ್ಟು ಪ್ರಯತ್ನವನ್ನು ಈ ನಿಟ್ಟಿನಲ್ಲಿ ನಡೆಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲಾಡಳಿತ, ಜನಪ್ರತಿನಿಧಿಗಳ ಪ್ರಯತ್ನವೂ ಇದರಲ್ಲಿದ್ದು, ಇದೀಗ ತಿಮ್ಮಯ್ಯ ಅವರು ಜನಿಸಿದ ಮನೆ ಜನಾಕರ್ಷಣೆಯ ತಾಣವಾಗಿ ರೂಪುಗೊಳ್ಳಲಿದೆ.
ವಿಶೇಷ ಆಕರ್ಷಣೆಗಳು :ಹಳೆಯ ಮನೆಯನ್ನೇ ವ್ಯವಸ್ಥಿತವಾಗಿ ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳಲಾಗಿದ್ದು, ತಿಮ್ಮಯ್ಯ ಅವರ ಹುಟ್ಟಿನಿಂದ ಅವರ ಬದುಕು-ಸಾಹಸ ಸಾಧನೆಗಳ ಯಶೋಗಾಥೆಯನ್ನು ಬಿಂಬಿಸುವ ಪ್ರಯತ್ನ ನಡೆದಿದೆ. ಮನೆ ಒಳಭಾಗದ ವಿನ್ಯಾಸ ವಿವಿಧ ಬಗೆಯ ಆಯುಧಗಳು, ಭಾವಚಿತ್ರಗಳು ಗಮನ ಸೆಳೆಯಲಿವೆ.
ಕೇಂದ್ರದ ಹೊರ ಆವಣರದಲ್ಲಿ ಯುದ್ಧ ಸ್ಮಾರಕ, ಯುದ್ಧ ವಿಮಾನ, ಟ್ಯಾಂಕರ್, ಬೃಹತ್ ಗಾತ್ರದ ಸೇನಾ ಬೂಟ್‍ಗಳು ನೋಡುಗರಲ್ಲಿ ಜನರಲ್ ತಿಮ್ಮಯ್ಯ ಅವರ ಬದುಕನ್ನು ನೆನಪಿಸುತ್ತವೆ. ಆಡಿಯೋ-ವೀಡಿಯೋ ಮೂಲಕವೂ ಮಾಹಿತಿಗಳೂ ಇಲ್ಲಿ ಲಭ್ಯವಾಗಲಿದ್ದು, ಈ ಮೂಲಕ ರಾಜ್ಯದಲ್ಲೇ ಇದೊಂದು ಉತ್ತಮ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ.
ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಮಧುಕರ್ ಪವಾರ್ ಅವರು ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಇತ್ತೀಚೆಗಷ್ಟೆ ದಕ್ಷಿಣ ವಲಯ ಐಜಿಪಿಯಾಗಿ ಅಧಿಕಾರ ವಹಿಸಿಕೊಂಡಿರುವ ಅವರು ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಗೂ ಅಧಿಕಾರಿಗಳೊಂದಿಗೆ ಇಲಾಖೆಯ ಕಾರ್ಯವೈಖರಿ ಕುರಿತು ಚರ್ಚಿಸಿದ್ದು, ಬಳಿಕ ಜನರಲ್ ತಿಮ್ಮಯ್ಯ ಮ್ಯೂಸಿಯಂ ಸ್ಥಳ, ಹೆಲಿಪ್ಯಾಡ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!