ಬೈಕ್‍ಗೆ ಟಿಪ್ಪರ್ ಡಿಕ್ಕಿ: ಹಿಂಬದಿ ಸವಾರ ಸ್ಥಳದಲ್ಲೇ ಸಾವು : ಕೊಡ್ಲಿಪೇಟೆಯಲ್ಲಿ ಘಟನೆ

January 17, 2021

ಮಡಿಕೇರಿ ಜ.17 : ಹಿಂಬದಿಯಿಂದ ಬಂದ ಟಿಪ್ಪರ್ ಲಾರಿಯೊಂದು ಬೈಕ್‍ಗೆ ಡಿಕ್ಕಿಯಾದ ಪರಿಣಾಮ ಬೈಕ್‍ನ ಹಿಂಬದಿ ಸವಾರ ಸಾವಿಗೀಡಾದ ಘಟನೆ ಇಲ್ಲಿಗೆ ಸಮೀಪದ ಕೊಡ್ಲಿಪೇಟೆಯಲ್ಲಿ ಭಾನುವಾರ ಪೂರ್ವಾಹ್ನ ನಡೆದಿದೆ.
ಕೊಡ್ಲಿಪೇಟೆ ಸಮಿಪದ ಕ್ಯಾತೆ ಗ್ರಾಮದ ನಿವಾಸಿ ಶಿವರಾಜ್ ಅಲಿಯಾಸ್ ಶಿವಣ್ಣ (72) ಎಂಬವರೇ ಅಪಘಾತದಲ್ಲಿ ಸಾವನ್ನಪಿದವರಾಗಿದ್ದು, ಬೈಕ್ ಚಾಲಿಸುತ್ತಿದ್ದ ರುದ್ರೇಶ್ (58) ಎಂಬವರು ಗಾಯಗೊಂಡಿದ್ದಾರೆ.
ಶಿವಣ್ಣ ಅವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿರುವ ಕಾಗಿನೆಲೆ ದೇವಸ್ಥಾನದಿಂದ ತಮ್ಮ ಸಂಬಂಧಿ ಆಲೂರು ತಾಲೂಕಿನ ಮಗ್ಗೆ ಗ್ರಾಮದ ರುದ್ರೇಶ್ ಎಂಬವರಿಗೆ ಸೇರಿದ ಬೈಕ್‍ನಲ್ಲಿ ಕೊಡ್ಲಿಪೇಟೆ ಮೂಲಕ ತನ್ನ ಸ್ವಗ್ರಾಮ ಕ್ಯಾತೆ ಗ್ರಾಮಕ್ಕೆ ವಾಪಾಸಾಗುತ್ತಿದ್ದರು. ಪೂರ್ವಾಹ್ನ 11 ಗಂಟೆ ಸುಮಾರಿಗೆ ಕೊಡ್ಲಿಪೇಟೆ ಪಟ್ಟಣದ ಮಸೀದಿ ಬಳಿ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿಯೊಂದು ಬೈಕ್ ಹಿಂಬದಿಗೆ ಡಿಕ್ಕಿಯಾಗಿದ್ದು, ಈ ಸಂದರ್ಭ ಬೈಕ್‍ನ ಹಿಂಬದಿಯಲ್ಲಿ ಕುಳಿತಿದ್ದ ಶಿವಣ್ಣ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಟಿಪ್ಪರ್‍ನ ಚಕ್ರ ಶಿವಣ್ಣ ಅವರ ತಲೆ ಮೇಲೆ ಹರಿದ ಪರಿಣಾಮ, ಗುರುತು ಸಿಗದ ರೀತಿಯಲ್ಲಿ ಶಿವಣ್ಣ ಸಾವನ್ನಪ್ಪಿದ್ದಾರೆ,
ರಸ್ತೆ ಬದಿಗೆ ಬಿದ್ದಿದ ರುದ್ರೇಶ್ ಸಣ್ಣಪುಟ್ಟ ಗಾಯಗೊಂಡು ರುದ್ರೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಿಪ್ಪರ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದು, ಸ್ಥಳೀಯರು ಮತ್ತು ಗಾಯಾಳು ಪೊಲೀಸರಿಗೆ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ. ಶನಿವಾರಸಂತೆ ಎಎಸ್‍ಐ ಗೋವಿಂದ್‍ರಾಜ್ ಸ್ಥಳ ಪರಿಶೀಲನೆ ನಡೆಸಿದರು.

error: Content is protected !!