ಬಾಳೆಲೆ ತಟ್ಟಕೆರೆಯಲ್ಲಿ ಕರಡಿ ದಾಳಿ : ಗಾಯಾಳು ಆಸ್ಪತ್ರೆಗೆ ದಾಖಲು

January 17, 2021

ಮಡಿಕೇರಿ ಜ.17 : ಕರಡಿ ದಾಳಿಯಿಂದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಳೆಲೆ ಗ್ರಾಮದ ತಟ್ಟಕೆರೆ ಶಾಲೆ ಬಳಿ ನಡೆದಿದೆ.
ತಟ್ಟಕೆರೆ ನಿವಾಸಿ ಜೇನು ಕುರುಬರ ರಾಜು ಎಂಬವರ ಮೇಲೆ ಕರಡಿ ದಾಳಿಯಾಗಿದೆ. ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕೂಲಿ ಕೆಲಸಕ್ಕೆ ತೆÀರಳುತಿದ್ದಾಗ ರಾಜು ಅವರ ಮೇಲೆ ಕರಡಿ ದಾಳಿಯಾಗಿದ್ದು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾ.ಪಂ ಸದಸ್ಯ ಚಕ್ಕೇರ ಅಯ್ಯಪ್ಪ ಸೂರ್ಯ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.
ಬಾಳೆಲೆ, ನಿಟ್ಟೂರು ವ್ಯಾಪ್ತಿಯಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಕೆಲವು ಕರಡಿಗಳು ಕಾಫಿ ತೋಟಗಳಲ್ಲೇ ಬೀಡು ಬಿಟ್ಟಿವೆ. ಇವುಗಳು ಆಹಾರಕ್ಕಾಗಿ ಹಣ್ಣುಗಳನ್ನು ಕೀಳುವ ಸಂದರ್ಭ ಕಾಫಿ ಗಿಡಗಳಿಗೆ ಹಾನಿಯಾಗುತ್ತಿದೆ. ಕರಡಿಯೊಂದು ಕಾಫಿ ತೋಟದಲ್ಲಿ ಮರಿ ಹಾಕಿದ್ದು, ಅದು ಇರುವ ಭಾಗದಲ್ಲಿ ಜನರ ಮೇಲೆ ದಾಳಿಯಾಗುವ ಸಾಧ್ಯತೆಗಳಿದೆ. ಕಾಡಾನೆ, ಹುಲಿ ದಾಳಿಯ ನಡುವೆಯೇ ಕರಡಿ ಉಪಟಳವೂ ಆರಂಭವಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣವಿದೆ. ವನ್ಯಜೀವಿಗಳಿಂದ ಬೆಳೆಗಾರರಿಗೆ ಆಗುತ್ತಿರುವ ನಷ್ಟವನ್ನು ಅರಣ್ಯ ಇಲಾಖೆಯೇ ಭರಿಸಬೇಕೆಂದು ಗ್ರಾ.ಪಂ ಸದಸ್ಯರುಗಳಾದ ಕಾಟಿಮಾಡ ಶರೀನ್, ಪಡಿಞರಂಡ ಕವಿತಾ ಹಾಗೂ ಅಮ್ಮಣಿ ಒತ್ತಾಯಿಸಿದ್ದಾರೆ.

error: Content is protected !!