ಜ.25ರಂದು ಮಡಿಕೇರಿಯಲ್ಲಿ ‘ಬಡವರ ಪೆರೇಡ್’ : ಹೋರಾಟ ಸಮಿತಿ ನಿರ್ಧಾರ

January 18, 2021

ಮಡಿಕೇರಿ ಜ.18 : ಕೊಡಗಿನ ಭೂಮಿ ಮತ್ತು ವಸತಿ ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತದ ನಡೆಯನ್ನು ವಿರೋಧಿಸಿ ಜ.25ರಂದು ಮಡಿಕೇರಿಯಲ್ಲಿ ‘ಬಡವರ ಪೆರೇಡ್’ ನಡೆಸಲಾಗುವುದು ಎಂದು ಕೊಡಗು ಜಿಲ್ಲಾ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಘೋಷಿಸಿದೆ. ಅಲ್ಲದೆ ಫೆಬ್ರವರಿ ಅಂತ್ಯದೊಳಗೆ ಸಮಸ್ಯೆಗೆ ಸ್ಪಂದನ ದೊರಕದಿದ್ದಲ್ಲಿ ಮಾರ್ಚ್ ತಿಂಗಳಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ದೆಹಲಿ ಮಾದರಿಯ ಅಹೋರಾತ್ರಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಅಮೀನ್ ಮೊಹ್ಸಿನ್ ಅವರು, ಕೊಡಗು ಜಿಲ್ಲೆಯಲ್ಲಿರುವ ಬಡವರು, ನಿವೇಶನ ಹಾಗೂ ವಸತಿ ರಹಿತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸಮಿತಿಯು 2016ರಿಂದ ನಿರಂತರ ಹೋರಾಟಗಳನ್ನು ನಡೆಸುವುದರೊಂದಿಗೆ 24 ವಿವಿಧ ಸಮಸ್ಯೆಗಳನ್ನು ಪಟ್ಟಿ ಮಾಡಿ ಜಿಲ್ಲಾಡಳಿತಕ್ಕೆ ಮನವಿ ನೀಡಲಾಗಿದೆ. ಆದರೆ ಕೆಲವು ಸಮಸ್ಯೆಗಳನ್ನು ಮಾತ್ರ ಪರಿಹರಿಸಿ ಉಳಿದ ಸಮಸ್ಯೆಗಳನ್ನು ಹಾಗೆಯೇ ಉಳಿಸಿಕೊಂಡು ಜಿಲ್ಲಾಡಳಿತ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.
ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಸಮಿತಿಯ ರಾಜ್ಯಾಧ್ಯಕ್ಷರಾಗಿರುವ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಅವರು ಹಲವಾರು ಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಬರೆದಿದ್ದರೂ, ಯಾವುದೇ ಸ್ಪಂದನೆ ದೊರಕಿಲ್ಲ ಎಂದು ದೂರಿದರು.
ಜಿಲ್ಲೆಯ ಬಾಳುಗೋಡುವಿನಲ್ಲಿ ನಿವೇಶನ ರಹಿತರು ನಡೆಸುತ್ತಿರುವ ಹೋರಾಟ ಒಂದು ವರ್ಷವನ್ನು ಪೂರೈಸಿದ್ದರೂ, ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಪಾಲೆಮಾಡುವಿನಲ್ಲಿ ಸ್ಮಶಾನ ಭೂಮಿಯನ್ನು ಕ್ರಿಕೆಟ್ ಸಂಸ್ಥೆಗೆ ನೀಡುವ ಮೂಲಕ ಜಿಲ್ಲಾಡಳಿತವೇ ಸಮಸ್ಯೆಯನ್ನು ಸೃಷ್ಟಿಸಿದೆ. ಚೆರಿಯಪರಂಬುವಿನಲ್ಲಿ ಹಲವಾರು ವರ್ಷಗಳಿಂದ ನೆಲೆಸಿರುವವರಿಗೆ ವಿದ್ಯುತ್ ಸೌಕರ್ಯ ನೀಡದೆ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತೆ ಮಾಡಿದೆ ಎಂದು ದೂರಿದ ಅವರು, ಜಿಲ್ಲೆಯ ಬಡವರು, ನಿವೇಶನ, ವಸತಿ ರಹಿತರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಜ.25ರಂದು ಬೆಳಗ್ಗೆ 11 ಗಂಟೆಗೆ ಮಡಿಕೇರಿಯ ಗದ್ದುಗೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾ ನಡೆಸುವುದರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸಮಸ್ಯೆಗಳ ಪರಿಹಾರಕ್ಕೆ ಫೆಬ್ರವರಿ ಅಂತ್ಯದವರೆಗೆ ಗಡುವು ನೀಡಲಾಗುವುದು. ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮಾರ್ಚ್ ತಿಂಗಳಿನಿಂದ ಸಮಸ್ಯೆ ಬಗೆಹರಿಯುವವರೆಗೂ ಜಿಲ್ಲಾಧಿಕಾರಿ ಕಚೇರಿ ಮುಂದೆ ದೆಹಲಿ ಮಾದರಿಯ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ನುಡಿದರು.
ರಾಜ್ಯ ಸಮಿತಿಯ ಮುಖಂಡ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಕೇಂದ್ರ ಸರಕಾರ ಸುಗ್ರಿವಾಜ್ಞೆಗಳ ಮೂಲಕ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ ಜ.26ರಂದು ಬೆಂಗಳೂರಿನಲ್ಲಿ ರಾಜಭವನ್ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸುಮಾರು 50 ಸಾವಿರ ಮಂದಿ ರೈತರು ಮತ್ತು ಕಾರ್ಮಿಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ದೆಹಲಿಯಲ್ಲಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ 3 ಲಕ್ಷಕ್ಕೂ ಅಧಿಕ ಮಂದಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಇದುವರೆಗೆ 100ಕ್ಕೂ ಅಧಿಕ ಮಂದಿ ರೈತರು ಸಾವಿಗೀಡಾಗಿದ್ದು, ಸ್ವಾತಂತ್ರ್ಯಾ ನಂತರ ನಡೆಯುತ್ತಿರುವ ಅತಿ ದೊಡ್ಡ ಪ್ರತಿಭಟನೆ ಇದಾಗಿದೆ. ಆದರೆ ಕೇಂದ್ರ ಸರಕಾರ ರೈತರ ನೋವನ್ನು ಆಲಿಸುವ ಕನಿಷ್ಟ ಸೌಜನ್ಯವನ್ನೂ ತೋರದ ನಿರ್ದಯಿ ಸರಕಾರವಾಗಿದೆ ಎಂದು ಟೀಕಿಸಿದರು.
ಜ.26ರಂದು ದೆಹಲಿಯಲ್ಲಿ ಸುಮಾರು ಒಂದು ಕೋಟಿ ರೈತರು ಪಾರ್ಲಿಮೆಂಟ್‍ಗೆ ಮುತ್ತಿಗೆ ಹಾಕಲಿದ್ದು, ಇದೇ ಸಂದರ್ಭ ದೇಶದ ವಿವಿಧ ರಾಜ್ಯಗಳಲ್ಲಿ ರಾಜಭವನ್ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯ ಸರಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವ ಮೂಲಕ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ. ಕೊಡಗಿನ ರೈತರ ಸಮಸ್ಯೆಗಳನ್ನು ಪರಿಹರಿಸಬೇಕಾದ ಸರಕಾರ ರೈತ ಮುಖಂಡರೊಂದಿಗೆ ಚರ್ಚಿಸದೆ ಕೇವಲ ಬೆಳೆಗಾರರ ಮುಖಂಡರೊಂದಿಗೆ ಮಾತುಕತೆ ನಡೆಸಿ ಕಾಯ್ದೆಯಲ್ಲಿ ಯಾವುದೇ ಮಾರಕ ಅಂಶಗಳಿಲ್ಲ ಎಂದು ಮನವರಿಕೆ ಮಾಡುವ ಪ್ರಯತ್ನ ನಡೆಸುತ್ತಿದೆ. ಆದರೆ ಕೊಡಗಿನ ಕೃಷಿ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿದ್ದು, ಕಾಫಿ ಬೆಳೆಗಾರರ ಬದಲು ನೈಜ ರೈತರೊಂದಿಗೆ ಮಾತುಕತೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಸಂಘನೆಯ ಮತ್ತೋರ್ವ ಮುಖಂಡ ಕೆ.ಮೊಣ್ಣಪ್ಪ ಮಾತನಾಡಿ, ರೈತರುಹೇಡಿಗಳಂತಾಗಲು ಸರಕಾರ ನೀತಿಗಳೇ ಕಾರಣವಾಗಿದ್ದು, ರೈತರಿಗೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ರೂಪಿಸಿದಲ್ಲಿ ಯಾವುದೇ ರೈತ ಆತ್ಮಹತ್ಯೆಗೆ ಶರಣಾಗುವುದಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಭೂಮಿ ಸಮಸ್ಯೆ ಪರಿಹಾರವಾಗದಿರುವುದಕ್ಕೆ ಕೆಲವು ಅಧಿಕಾರಿಗಳ ಧೋರಣೆಯೇ ಕಾರಣವಾಗಿದೆ ಎಂದು ಆರೋಪಿಸಿದ ಅವರು, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬದಲು ಮತ್ತಷ್ಟು ಜಟಿಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ವಿರುದ್ಧ ಹೋರಾಟ ಮಾಡುವವರಿಗೆ ಕೊರೋನಾದ ಭಯ ಹುಟ್ಟಿಸಿ ಮನೆಯಿಂದ ಹೊರಬರದಂತೆ ಮಾಡಲಾಗುತ್ತಿದೆ. ಆ ಮೂಲಕ ಹೋರಾಟಗಳನ್ನು ಹತ್ತಿಕ್ಕುವ ಷಡ್ಯಂತ್ರ ನಡೆಸಲಾಗುತ್ತಿದೆ. ಇತರ ಸಭೆ, ಸಮಾರಂಭಗಳಿಗೆ ಇಲ್ಲದ ಕೊರೋನಾದ ಷರತ್ತುಗಳು ಕೇವಲ ಹೋರಾಟಗಳಿಗೆ ಮಾತ್ರ ಅನ್ವಯಿಸುತ್ತಿರುವುದು ಖಂಡನೀಯ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪಿ.ಎ.ಕುಸುಮ ಹಾಗೂ ಹೇಮಂತಕುಮಾರ್ ಉಪಸ್ಥಿತರಿದ್ದರು.

error: Content is protected !!