ಬಿಡುಗಡೆಯಾಗದ ಗೌರವಧನ : ಪೊನ್ನಂಪೇಟೆಯಲ್ಲಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

January 18, 2021

ಮಡಿಕೇರಿ ಜ.18 : ಸಕಾಲದಲ್ಲಿ ಗೌರವಧನ ಬಿಡುಗಡೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಪೊನ್ನಂಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ಸರ್ಕಾರ ಅಂಗನವಾಡಿ ಸಿಬ್ಬಂದಿಗಳಿಂದ ಎಲ್ಲಾ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದೆ. ಕೊರೋನಾ ವಾರಿಯರ್ಸ್ ಎಂದು ಹಾಡಿ ಹೊಗಳುತ್ತಿದೆ. ಆದರೆ ಗೌರವಧನ ಮಾತ್ರ ಸಕಾಲದಲ್ಲಿ ಬಿಡುಗಡೆ ಮಾಡುತ್ತಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು. ಪೌಷ್ಠಿಕ ಆಹಾರದ ಕೊರತೆಯೂ ಎದುರಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ವಿರಾಜಪೇಟೆ ಮತ್ತು ಪೊನ್ನಂಪೇಟೆಗೆ ಬಿಡುಗಡೆಯಾಗುತ್ತಿರುವ ಪೌಷ್ಠಿಕ ಆಹಾರ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು.
ಅಂಗನವಾಡಿ ಸಿಬ್ಬಂದಿಗಳಿಗೆ ಕಳಪೆ ಗುಣಮಟ್ಟದ ಸೀರೆಗಳನ್ನು ನೀಡಲಾಗಿದೆ. ದಿನ ಪೂರ್ತಿ ದುಡಿಸಿಕೊಂಡು ಗೌರವಧನ ನೀಡದೆ ಸತಾಯಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕರ್ತರು ಹಾಗೂ ಸಹಾಯಕಿಯರ ಬೇಡಿಕೆ ಈಡೇರುವಲ್ಲಿಯವರೆಗೆ ಕೊಡಗು ರಕ್ಷಣಾ ವೇದಿಕೆ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.

error: Content is protected !!