ಜ.23 ರಂದು ಪ್ರಗತಿಪರ ಜನಾಂದೋಲನ ವೇದಿಕೆಯಿಂದ ಪ್ರತಿಭಟನೆ

January 18, 2021

ಮಡಿಕೇರಿ ಜ.18 : ಕೃಷಿ ತಿದ್ದುಪಡಿ ಕಾಯ್ದೆಯನ್ನು ಕೈಬಿಡುವಂತೆ ಒತ್ತಾಯಿಸಿ ದೇಶಾದ್ಯಂತ ರೈತರು ನಡೆಸುತ್ತಿರುವ ಚಳುವಳಿಗೆ ಪೂರಕವಾಗಿ ಕೊಡಗು ಜಿಲ್ಲಾ ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ ಜ.23 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆಯ ಪ್ರಧಾನ ಸಂಚಾಲಕ ವಿ.ಪಿ.ಶಶಿಧರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್, ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿ, ಹಸಿರು ಸೇನೆ, ರೈತಪರ ಸಂಘಟನೆಗಳು, ಸಮಾನ ಮನಸ್ಕರು ಒಗ್ಗೂಡಿ ರೈತಪರ ರೂಪುರೇಷೆ ಬಗ್ಗೆ ಸಭೆ ನಡೆಸಿ ಹೋರಾಟದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ “ಮಡಿಕೇರಿ ಚಲೋ” ಹೋರಾಟವನ್ನು ನಡೆಸಲಾಗುವುದೆಂದು ತಿಳಿಸಿದ ಶಶಿಧರ್, ಕೇಂದ್ರ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುವವರೆಗೂ ರೈತಪರ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ರೈತರಿಗೆ ಮಾರಕವಾದ ಕೃಷಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ. ಈ ದೇಶ ಕಂಡ ದುರ್ಬಲ ಪ್ರಧಾನಿ ನರೇಂದ್ರಮೋದಿ ಅವರು ಎನ್ನುವುದು ಈಗಾಗಲೇ ಸಾಬೀತಾಗಿದೆ ಎಂದು ಆರೋಪಿಸಿದ ಶಶಿಧರ್, ಪ್ರಗತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ಸುದೀರ್ಘವಾಗಿ ಮೋಸ ಮಾಡಲು ಸಾಧ್ಯವಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ನಿರ್ದೇಶಕ ಶಶಿಭೀಮಯ್ಯ, ಮಾಜಿ ಅಧ್ಯಕ್ಷ ಹೆಚ್.ಎ.ರಮೇಶ್, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಎಸ್.ಹೆಚ್.ಜವರಪ್ಪ, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಹಾಗೂ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ಕಾರ್ಯದರ್ಶಿ ಕೆ.ಮೊಣ್ಣಪ್ಪ ಉಪಸ್ಥಿತರಿದ್ದರು.

error: Content is protected !!