ಜ. 26ರ ರೈತರ ಟ್ರ್ಯಾಕ್ಟರ್‌ ರ‍್ಯಾಲಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ

19/01/2021

ನವದೆಹಲಿ: ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್‌ ರ‍್ಯಾಲಿಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ದೆಹಲಿ ಪೊಲೀಸರ ಕರ್ತವ್ಯ. ಇದರಲ್ಲಿ ತಾನು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ. ಆ ಮೂಲಕ ಚೆಂಡನ್ನು ದೆಹಲಿ ಪೊಲೀಸರ ಅಂಗಳಕ್ಕೆ ಎಸೆದಿದೆ.

ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್‌ ರ‍್ಯಾಲಿಗೆ ತಡೆ ನೀಡಬೇಕು. ಗಣರಾಜ್ಯೋತ್ಸವ ದಿನದಂದು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರತಿಷ್ಠೆಗೆ ಧಕ್ಕೆಯಾಗಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಹವಾಲು ಸಲ್ಲಿಸಿತ್ತು.

ಇದರ ವಿಚಾರಣೆ ನಡೆಸಿದ ಕೋರ್ಟ್‌, ಕಾನೂನು ಸುವ್ಯವಸ್ಥೆ ಕಾಪಾಡುವುದು ದೆಹಲಿ ಪೊಲೀಸರ ಕರ್ತವ್ಯ. ಕೋರ್ಟ್‌ ಇದರಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಆ ಮೂಲಕ ಟ್ರ್ಯಾಕ್ಟರ್‌ ರ‍್ಯಾಲಿಯನ್ನು ತಡೆಯಲು ಹೊರಟಿದ್ದ ಕೇಂದ್ರ ಸರ್ಕಾರಕ್ಕೆ ಮುಖಭಂಗ ಉಂಟಾಗಿದೆ.

ರೈತರ ಪ್ರತಿಭಟನೆ ಬಗ್ಗೆ ಕೋರ್ಟ್‌ ಉಸ್ತುವಾರಿ ತೆಗೆದುಕೊಂಡಿರುವುದರಿಂದ, ಈ ಬಗ್ಗೆ ನಿಮಗೆ ಮನವಿ ಸಲ್ಲಿಸಲಾಗಿದೆ ಎನ್ನುವ ಸರ್ಕಾರದ ಪರ ವಕೀಲ ಅಟಾರ್ನಿ ಜನರಲ್‌ ಕೆ.ಕೆ ವೇಣುಗೋಪಾಲ್‌ ಅವರ ಮಾತನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ನೀವು ತಪ್ಪು ತಿಳಿದುಕೊಂಡಿದ್ದೀರಿ. ನಮ್ಮ ನ್ಯಾಯ ನಿರ್ಣಯ, ಮೂರು ಕೃಷಿ ಕಾಯ್ದೆಗಳ ಸಾಂವಿಧಾನಿಕ ಮಾನ್ಯತೆ ಬಗ್ಗೆ ಮಾತ್ರ ಎಂದು ಹೇಳಿದೆ.