ಕಣ್ಣುಗಳ ಆರೋಗ್ಯಕ್ಕೆ ಇವುಗಳನ್ನು ಸೇವಿಸಿ

19/01/2021

ಕಣ್ಣುಗಳು ಮನುಷ್ಯನ ದೇಹದ ಅವಿಭಾಜ್ಯ ಅಂಗಗಳು. ಇಂದು ನಮಗೆ ಕಣ್ಣುಗಳು ಇರುವುದರಿಂದಲೇ ನಮ್ಮ ಪ್ರತಿ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತಿವೆ. ಕೆಲವೊಮ್ಮೆ ನಾವು ಮಾಡುವ ತಪ್ಪಿನಿಂದಾಗಿ ಅಥವಾ ಅನುವಂಶೀಯವಾಗಿ ನಮ್ಮ ಕಣ್ಣುಗಳಿಗೆ ಸಮಸ್ಯೆ ಎದುರಾಗುತ್ತದೆ.

ಕಣ್ಣುಗಳಲ್ಲಿ ಒಂದಕ್ಕೆ ಸಮಸ್ಯೆಯಾದರೂ ನಮಗೆ ಬಹಳ ಕಷ್ಟವಾಗುತ್ತದೆ. ಕಣ್ಣುಗಳ ಆರೋಗ್ಯವನ್ನು ನಾವು ರಕ್ಷಣೆ ಮಾಡಿಕೊಳ್ಳಲು ನಮ್ಮ ಆಹಾರ ಪದ್ಧತಿಯಲ್ಲಿ ಕಣ್ಣುಗಳಿಗೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಆಹಾರಗಳನ್ನು ಸೇರಿಸಿ ಸೇವನೆ ಮಾಡಬೇಕು.

ಕ್ಯಾರೆಟ್ : ಕ್ಯಾರೆಟ್ ನಲ್ಲಿ ವಿಟಮಿನ್ ಎ ಅಂಶ ಅಪಾರ ಪ್ರಮಾಣದಲ್ಲಿದೆ. ಜೊತೆಗೆ ಬೀಟಾ-ಕ್ಯಾರೋಟಿನ್ ಅಂಶ ಕೂಡ ಇದೆ. ಕಿತ್ತಳೆ ಬಣ್ಣದ ಯಾವುದೇ ಹಣ್ಣು ಮತ್ತು ತರಕಾರಿಯಲ್ಲಿ ಈ ಎರಡು ಅಂಶಗಳು ಕಂಡು ಬರುತ್ತವೆ.
ಇವುಗಳ ಮುಖ್ಯ ಕೆಲಸ ಎಂದರೆ, ಕಣ್ಣುಗಳ ಮೇಲೆ ಬೀಳುವ ಬೆಳಕನ್ನು ನಿಯಂತ್ರಣ ಮಾಡಿಕೊಂಡು ಕಣ್ಣುಗಳ ದೃಷ್ಟಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು. ರಾತ್ರಿಯ ಸಮಯದಲ್ಲಿ ರಾತ್ರಿ ಕುರುಡು ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವುದು ಕೂಡ ಈ ಅಂಶಗಳ ಕೆಲಸವೇ ಆಗಿರುತ್ತದೆ.
ನಿಮ್ಮ ಕಣ್ಣುಗಳ ಬಗ್ಗೆ ನಿಮಗೆ ಒಂದು ವೇಳೆ ಅಪಾರವಾದ ಕಾಳಜಿ ಇದ್ದರೆ, ಪ್ರತಿದಿನ ಒಂದೊಂದು ಕ್ಯಾರೆಟ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರ ಜೊತೆಗೆ ಸಿಹಿ ಗೆಣಸು, ಕುಂಬಳಕಾಯಿ ಸೇವನೆ ಮಾಡಿದರೆ ಉತ್ತಮ.
ಆಲಿವ್ ಆಯಿಲ್ ಬಳಕೆ ಮಾಡಿ ಇವುಗಳಿಗೆ ಸ್ವಲ್ಪ ಮಸಾಲೆ ಮಿಶ್ರಣ ಮಾಡಿ ಸೇವನೆ ಮಾಡಿದರೆ ಇನ್ನೂ ಉತ್ತಮ. ನಮ್ಮ ದೇಹದ ಜೀವಕೋಶಗಳನ್ನು ಸದೃಢವಾಗಿಸಿ, ದೇಹಕ್ಕೆ ಅಪಾರವಾದ ಪೌಷ್ಠಿಕಾಂಶಗಳನ್ನು ಹೀರಿಕೊಳ್ಳಲು ಇವುಗಳು ಸಹಾಯಮಾಡುತ್ತವೆ.

ಪಾಲಕ್ ಸೊಪ್ಪು : ಹಸಿರು ಎಲೆ ತರಕಾರಿಗಳ ಗುಂಪಿಗೆ ಸೇರಿದ ಪಾಲಕ್ ಸೊಪ್ಪು ಪ್ರತಿದಿನ ನಮ್ಮ ಆಹಾರ ಪದ್ಧತಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ದೇಹ ಸೇರಿದರೆ ತುಂಬಾ ಒಳ್ಳೆಯದು.
ಇದರ ಜೊತೆಗೆ ಬ್ರೊಕೋಲಿ ಮತ್ತು ಕೇಲ್ ಕಣ್ಣುಗಳ ಆರೋಗ್ಯಕ್ಕೆ ಸಹಕಾರಿಯಾದ ನೈಸರ್ಗಿಕ ಔಷಧೀಯ ಅಂಶಗಳನ್ನು ಮತ್ತು ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತವೆ.
ಇದರ ಕಾರಣ ಕಣ್ಣುಗಳಿಗೆ ಪೊರೆ ಬಂದಂತೆ ಸಮಸ್ಯೆ ಎದುರಾಗುವುದು ತಪ್ಪುತ್ತದೆ. ಪ್ರಮುಖವಾಗಿ ನೀಲಿ ಬಣ್ಣದಿಂದ ಕಣ್ಣುಗಳಿಗೆ ತೊಂದರೆ ಆಗುವುದು ತಪ್ಪುತ್ತದೆ. ಈಗಂತೂ ವರ್ಕ್ ಫ್ರಮ್ ಹೋಮ್ ನಲ್ಲಿ ಹಲವರು ಇರುವುದರಿಂದ ಕಂಪ್ಯೂಟರ್ ಸ್ಕ್ರೀನ್ ಹೆಚ್ಚಾಗಿ ನೋಡುವ ಕಾರಣದಿಂದ ಕಣ್ಣುಗಳಿಗೆ ಹಾನಿ ಆಗುವುದು ಖಂಡಿತ.
ಹೆಚ್ಚಾಗಿ ಮೊಬೈಲ್ ಸ್ಕ್ರೀನ್ ನೋಡುವುದರಿಂದಲೂ ಕಣ್ಣುಗಳಿಗೆ ಸಮಸ್ಯೆ ತಪ್ಪಿದ್ದಲ್ಲ. ಪ್ರತಿದಿನ ಕನಿಷ್ಠ 100 ಗ್ರಾಂ ಕ್ಯಾರೆಟ್, ಸಿಹಿಗೆಣಸಿನ ಸಲಾಡ್, ಪಾಲಕ್ ಸೊಪ್ಪಿನ ಪಲ್ಯ, ಬ್ರೊಕೋಲಿ ಇವುಗಳಲ್ಲಿ ಯಾವುದಾದರೂ ಒಂದನ್ನು ಸೇವನೆ ಮಾಡುವ ಅಭ್ಯಾಸವನ್ನು ರೂಡಿ ಮಾಡಿಕೊಳ್ಳಿ.

ಕಿತ್ತಳೆ ಹಣ್ಣು : ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿದೆ. ಒಂದು ಅಧ್ಯಯನ ಹೇಳುವ ಹಾಗೆ ಸುಮಾರು ಹತ್ತು ವರ್ಷಗಳ ಕಾಲ ಯಾರು ವಿಟಮಿನ್ ಸಿ ಅಂಶವನ್ನು ಹೆಚ್ಚಾಗಿ ಪ್ರತಿದಿನವೂ ಸೇವನೆ ಮಾಡುತ್ತಾರೆ ಅವರಿಗೆ ವಯಸ್ಸಾದ ಮೇಲೆ ಕಣ್ಣುಗಳ ಸಮಸ್ಯೆ ಶೇಕಡ 64% ಕಡಿಮೆಯಾಗಿರುತ್ತದೆ.
ಇನ್ನಿತರ ವಿಟಮಿನ್ ಸಿ ಅಂಶ ಹೆಚ್ಚಾಗಿರುವ ಹಣ್ಣುಗಳು ಎಂದರೆ ಟೊಮೆಟೊ ಹಣ್ಣುಗಳು ಜೊತೆಗೆ ಕೆಂಪು ದಪ್ಪ ಮೆಣಸಿನಕಾಯಿ. ಇವುಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯಕ್ಕೆ ಸಾಕಷ್ಟು ಉತ್ತಮ.

ಬೆರ್ರಿ ಹಣ್ಣುಗಳು : ರಾತ್ರಿಯ ಸಮಯದಲ್ಲಿ ಕಣ್ಣುಗಳು ಚೆನ್ನಾಗಿ ಕಾಣಲು ಬೆರ್ರಿ ಹಣ್ಣುಗಳನ್ನು ತಿನ್ನಬೇಕು ಎಂದು ಕೆಲವರು ಹೇಳುತ್ತಾರೆ. ಇದು ಸತ್ಯ ಕೂಡ. ಏಕೆಂದರೆ ಬೆರ್ರಿ ಹಣ್ಣುಗಳಲ್ಲಿ ಕುರುಡುತನವನ್ನು ಕಡಿಮೆ ಮಾಡುವ ಮತ್ತು ಕಣ್ಣಿನ ಪೊರೆ ಸಮಸ್ಯೆ ಬರದಂತೆ ತಡೆಯುವ ಗುಣಲಕ್ಷಣಗಳಿವೆ.
ರಕ್ತ ನಾಳಗಳನ್ನು ಬಲಪಡಿಸಿ ಕಣ್ಣುಗಳಿಗೆ ಅಗತ್ಯ ಪ್ರಮಾಣದ ಪೌಷ್ಟಿಕಾಂಶಗಳನ್ನು ಸೇರಿಸುವ ಪ್ರಯತ್ನ ಈ ಹಣ್ಣುಗಳು ಮಾಡುತ್ತವೆ.
ನೀವು ಬೆಳಗಿನ ಉಪಾಹಾರದ ಸಮಯದಲ್ಲಿ ಅಥವಾ ಸಂಜೆಯ ಸ್ನ್ಯಾಕ್ಸ್ ಸಮಯದಲ್ಲಿ ಬೆರ್ರಿ ಹಣ್ಣುಗಳನ್ನು ಸ್ಮೂಥಿ ತಯಾರು ಮಾಡಿಕೊಂಡು ತಿನ್ನಬಹುದು.

ಮೈಲಿ ಫಿಶ್ : ಸಮುದ್ರಾಹಾರಗಳಲ್ಲಿ ಕೆಲವು ನಮ್ಮ ಕಣ್ಣುಗಳಿಗೆ ಹೆಚ್ಚು ಪ್ರಯೋಜನಕ್ಕೆ ಬರುತ್ತವೆ. ಉದಾಹರಣೆಗೆ ತಾಜಾ ಟ್ಯೂನ ಮೀನು, ಮ್ಯಾಕೆರೆಲ್, ಸಾಲ್ಮನ್ ಇತ್ಯಾದಿಗಳು ತಮ್ಮಲ್ಲಿ ಕಣ್ಣುಗಳ ರೆಟಿನಾ ಭಾಗದಲ್ಲಿ ಕಂಡು ಬರುವ ಫ್ಯಾಟಿ ಆಸಿಡ್ ಅಂಶವನ್ನು ಒಳಗೊಂಡಿರುತ್ತವೆ.
ಇವುಗಳ ಸೇವನೆಯಿಂದ ಕಣ್ಣುಗಳ ಒಣಗುವಿಕೆ ಸಮಸ್ಯೆ ದೂರವಾಗುತ್ತದೆ. ಇದರ ಜೊತೆಗೆ ಪ್ರಸಿದ್ಧ ಸಂಶೋಧನಾ ಸಂಸ್ಥೆ ಹೇಳಿರುವ ಹಾಗೆ ಒಮೆಗಾ 3 ಫ್ಯಾಟಿ ಆಸಿಡ್ ಅಂಶ ಹೆಚ್ಚಾಗಿರುವ ಯಾವುದೇ ಆಹಾರಗಳು ವಯಸ್ಸಾದಂತೆ ಎದುರಾಗುವ ಕಣ್ಣಿನ ಸಮಸ್ಯೆಗಳನ್ನು ದೂರ ಮಾಡುತ್ತದೆ.
ವಾರದಲ್ಲಿ ಎರಡು ಬಾರಿ ಇಂತಹ ಸಮುದ್ರ ಆಹಾರಗಳನ್ನು ಸೇವನೆ ಮಾಡುವುದರಿಂದ ಆರೋಗ್ಯಕರವಾದ ಕಣ್ಣಿನ ದೃಷ್ಟಿಯನ್ನು ಹೊಂದಬಹುದು.

ಬಾದಾಮಿ ಬೀಜಗಳು : ಬಾದಾಮಿ ಬೀಜಗಳಲ್ಲಿ ವಿಟಮಿನ್ ಈ ಅಂಶ ಇದೆ. ಇದು ಫ್ರೀ ರಾಡಿಕಲ್ ಗಳಿಂದ ಕಣ್ಣುಗಳ ಹಾನಿಯನ್ನು ತಪ್ಪಿಸುತ್ತದೆ. ಆಕ್ಸಿಡೇಶನ್ ಪ್ರಕ್ರಿಯೆಯಿಂದ ಚರ್ಮದಲ್ಲಿರುವ ಜೀವಕೋಶಗಳನ್ನು ರಕ್ಷಣೆ ಮಾಡುವ ಕೆಲಸ ಇದು ಮಾಡುತ್ತದೆ.
ಕಣ್ಣಿನ ಪೊರೆ ಸಮಸ್ಯೆಯನ್ನು ನಿವಾರಣೆ ಮಾಡುವ ಜೊತೆಗೆ ಕಣ್ಣುಗಳಿಗೆ ಸಂಬಂಧಪಟ್ಟ ಯಾವುದೇ ಕಾಯಿಲೆ ಬರದಂತೆ ನೋಡಿಕೊಳ್ಳುತ್ತದೆ. ಸಂಜೆಯ ಸ್ನ್ಯಾಕ್ಸ್ ಸಮಯದಲ್ಲಿ. ಒಂದು ಹಿಡಿ ಬಾದಾಮಿ ಬೀಜಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ.