‘ಬಡವರ ಪೆರೇಡ್’ಗೆ ಚೆರಿಯಪರಂಬು ನಿವಾಸಿಗಳ ಬೆಂಬಲ

January 19, 2021

ಮಡಿಕೇರಿ ಜ. 19 : ಕೊಡಗಿನ ಭೂಮಿ ಮತ್ತು ವಸತಿ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿ ಜ.25ರಂದು ಮಡಿಕೇರಿಯಲ್ಲಿ ನಡೆಯುವ ‘ಬಡವರ ಪೆರೇಡ್’ಗೆ ಚೆರಿಯಪರಂಬು ನಿವಾಸಿಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಜಿಲ್ಲಾ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯ ಹಾಗೂ ಚೆರಿಯಪರಂಬು ನಿವಾಸಿ ಎಂ.ಬಿ.ದಿಲೀಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ವಿವಿಧ ಸಂಘಟನೆಗಳು ಚೆರಿಯಪರಂಬು ಕಾವೇರಿ ನದಿಯನ್ನು ಅಲ್ಲಿನ ನಿವಾಸಿಗಳು ಮಲೀನಗೊಳಿಸುತ್ತಿದ್ದಾರೆ ಎಂದು ಆರೋಪಿಸುತ್ತಾ ಬಂದಿದ್ದಾರೆ. ಆದರೆ ಸ್ವತ: ನಾಪೋಕ್ಲು ಗ್ರಾ.ಪಂ ಯೇ ಕಾವೇರಿ ನದಿ ದಡದಲ್ಲಿ ಕಸವಿಲೇವಾರಿ ಮಾಡುತ್ತಿದೆ ಎಂದು ಆರೋಪಿಸಿದರು.
ಕಳೆದ ಮೂರು ವರ್ಷಗಳ ಮಹಾಮಳೆಗೆ ಕಾವೇರಿ ನದಿ ದಡದ ಮಂದಿ ಸಂತ್ರಸ್ತರಾಗಿದ್ದು, ಸರ್ಕಾರದಿಂದ ಯಾವುದೇ ಮೂಲಭೂತ ಸೌಲಭ್ಯ ದೊರೆಯದೆ ಇರುವುದರಿಂದ ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಆದ್ದರಿಂದ ಸರ್ಕಾರ ಭೂಮಿ ಮತ್ತು ವಸತಿ ವಂಚಿತರಿಗೆ ಸಂವಿಧಾನದಡಿಯಲ್ಲಿ ಸಿಗುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ತಪ್ಪಿದಲ್ಲಿ ನಿರಂತರವಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಮತ್ತೊಬ್ಬ ಸದಸ್ಯರಾದ ಕೆ.ಶರೀಫ ಮಾತನಾಡಿ, ಚೆರಿಯಪರಂಬು ನಿವಾಸಿಗಳ ಸಂಕಷ್ಟಕ್ಕೆ ಜಿಲ್ಲಾಧಿಕಾರಿಗಳು ತಕ್ಷಣ ಸ್ಪಂದಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಚೆರಿಯಪರಂಬು ನಿವಾಸಿಗಳು ಹಾಗೂ ಸಮಿತಿಯ ಸದಸ್ಯರುಗಳಾದ ಸಿ.ಕೆ.ಪದ್ಮನಾಭ, ಎಂ.ಬಿ.ಯೋಗೇಶ್ ಹಾಗೂ ಟಿ.ಆರ್.ವಿಜಯ್ ಉಪಸ್ಥಿತರಿದ್ದರು.

error: Content is protected !!