ಕಾರ್ಯಪ್ಪ ಕಾಲೇಜಿನಲ್ಲಿ ಎನ್‍ಸಿಸಿ ಶಿಬಿರ : ಸಮಾಜದ ಸಂಕಷ್ಟಗಳಿಗೆ ನೆರವಾಗಲು ಕರ್ನಲ್ ಚೇತನ್ ಧಿಮನ್ ಕರೆ

January 20, 2021

ಮಡಿಕೇರಿ: ಸಮಾಜದ ಸಂಕಷ್ಟಗಳಿಗೆ ನೆರವಾಗುವುದು ನಮ್ಮ ಜವಾಬ್ದಾರಿಯಾಗಿದ್ದು, ಯಾವುದೇ ರೀತಿಯ ನೈಸರ್ಗಿಕ ವಿಕೋಪಕ್ಕೆ ನೆರವಾಗಲು ಎನ್.ಸಿ.ಸಿ ಸದಾ ಸಿದ್ಧವಾಗಿದೆ ಎಂದು 19ನೇ ಕರ್ನಾಟಕ ಎನ್.ಸಿ.ಸಿ ಬೆಟಾಲಿಯನ್‍ನ ಕಮಾಂಡಿಂಗ್ ಆಫೀಸರ್ ಕರ್ನಲ್ ಚೇತನ್ ಧಿಮನ್ ಅವರು ತಿಳಿಸಿದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಐದು ದಿನಗಳ ಕಾಲ ನಡೆಯಲಿರುವ ವಾರ್ಷಿಕ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಸಂಭವಿಸಿದ ಭೂ ಕುಸಿತ ಸಂದರ್ಭದಲ್ಲಿ ಎನ್.ಸಿ.ಸಿ ವತಿಯಿಂದ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಜನಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ, ಈ ಇತ್ತೀಚಿನ ಕೋವಿಡ್ 19 ಸಾಂಕ್ರಾಮಿಕ ಸಂದರ್ಭದಲ್ಲಿಯೂ ಎನ್.ಸಿ.ಸಿ ಯಿಂದ ಜನರಿಗೆ ನೆರವು ನೀಡುವ ಕಾರ್ಯಗಳು ಆಗಿದ್ದು, ಮುಂದಿನ ದಿನಗಳಲ್ಲಿಯೂ ನಮ್ಮ ಜವಾಬ್ದಾರಿ ಮತ್ತಷ್ಟು ವಿಸ್ತರಿಸಲಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಕೆಡೆಟ್‍ಗಳಿಗೆ ಬಂದೂಕು ಬಳಕೆ ತರಬೇತಿಯೊಂದಿಗೆ ಸಂವಹನ ಕಲೆ, ವ್ಯಕ್ತಿತ್ವ ವಿಕಸನ ಕೌಶಲ್ಯಗಳನ್ನೂ ಕಲಿಸಿಕೊಡಲಾಗುತ್ತದೆಯಲ್ಲದೆ, ನೈಸರ್ಗಿಕ ಸಂಕಷ್ಟದ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಸೌಜನ್ಯದಿಂದ ನೆರವಾಗುವ ಕೌಶಲ್ಯವನ್ನೂ ಕಲಿಸಿಕೊಡಲಾಗುತ್ತದೆ ಎಂದು ವಿವರಿಸಿದರು.
ವಿದ್ಯಾರ್ಥಿಗಳಲ್ಲಿ ಪರಿಪೂರ್ಣ ಮಾನವೀಯ ಗುಣಹೊಂದಿರುವ ವ್ಯಕ್ತಿತ್ವ ರೂಪಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವುದು ನಮ್ಮ ಮೂಲ ಗುರಿ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳಾದ ಇಂದ್ರಜಿತ್, ಯಶಸ್ವಿ ಅವರು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆಯಾಗಿರುವುದು ಹಾಗೂ ಮತ್ತೋರ್ವ ಕೆಡೆಟ್ ಭೂಮಿಕ, ಯೂತ್ ಎಕ್ಸ್‍ಚೇಂಜ್ ಪ್ರೋಗ್ರಾಂಗೆ ಆಯ್ಕೆಯಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು.
ತಮ್ಮಲ್ಲಿರುವ ಸಾಮಥ್ರ್ಯವನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸಲು ಎನ್.ಸಿ.ಸಿಯು ತುಂಬಾ ಅನುಕೂಲಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಸಮಾಜದಲ್ಲಿ ಉತ್ತಮ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಇನ್ನಿತರ ವಿದ್ಯಾರ್ಥಿಗಳು ಕೂಡ ಎನ್.ಸಿ.ಸಿಗೆ ಸೇರಲು ಪ್ರೇರಣೆಯಾಗಬೇಕು ಎಂದು ಅವರು ಕರೆ ನೀಡಿದರು. ಎನ್.ಸಿ.ಸಿಯ ವತಿಯಿಂದ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ವೇತನ ಕೊಡಲಾಗುತ್ತಿದ್ದು, ಅದರ ಸದುಪಯೋಗಪಡೆದುಕೊಳ್ಳಬೇಕೆಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ಪ್ರಾಂಶುಪಾಲರಾದ ಡಾ. ಚೌರೀರ ಜಗತ್ ತಿಮ್ಮಯ್ಯ, ವಿದ್ಯಾರ್ಥಿಗಳು ಎನ್.ಸಿ.ಸಿಯಲ್ಲಿ ತೊಡಗಿಕೊಳ್ಳುವುದು ಜೀವನದಲ್ಲಿ ಯಶಸ್ವಿಯಾಗಲು ಅನುಕೂಲವಾಗುವುದಲ್ಲದೆ, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಪ್ರತೀ ವರ್ಷವೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳು ರಾಷ್ಟ್ರೀಯ ಮಟ್ಟದಲ್ಲಿ ಶಿಬಿರಗಳಿಗೆ ಆಯ್ಕೆಯಾಗುವ ಮೂಲಕ ತಮ್ಮ ಸಾಮಥ್ಯವನ್ನು ತೋರಿಸುವುದರೊಂದಿಗೆ ಜಿಲ್ಲೆಗೆ, ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಅದರ ಸಾಲಿನಲ್ಲಿ ಇದೀಗ ಇಂದ್ರಜಿತ್, ಯಶಸ್ವಿ, ಭೂಮಿಕ ಗುರುತಿಸಿಕೊಂಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಸಾಮಾನ್ಯವಾಗಿ ಎನ್‍ಸಿಸಿ ಶಿಬಿರಗಳಲ್ಲಿ ಬೇರೆ ಬೇರೆ ಕಡೆಗಳಿಂದ ವಿದ್ಯಾರ್ಥಿಗಳು ಆಗಮಿಸುವುದರಿಂದ ವಿವಿಧ ಸಂಸ್ಕøತಿಯ ಪರಿಚಯ ಆಗುತ್ತದೆಯಾದರೂ, ಪ್ರಸಕ್ತ ಕೋವಿಡ್ 19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಆ ರೀತಿಯ ವ್ಯವಸ್ಥೆ ಇಲ್ಲಿ ಇಲ್ಲದಿದ್ದರೂ, ಪ್ರತೀ ದಿನ ಕೆಡೆಟ್‍ಗಳು ಮನೆಗೆ ಹೋಗಿ ಬಂದು ಇಲ್ಲಿ ತರಬೇತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕಾಲೇಜಿನ ಎನ್‍ಸಿಸಿ ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥರಾದ ಮೇಜರ್ ಡಾ. ರಾಘವ ಬಿ ಅವರು ಶಿಬಿರದ ಸ್ಥೂಲ ಪರಿಚಯ ನೀಡುತ್ತಾ, ಇಲ್ಲಿ ವಿದ್ಯಾರ್ಥಿಗಳಿಗೆ ಮ್ಯಾಪ್ ರೀಡಿಂಗ್, ವ್ಯಕ್ತಿತ್ವ ವಿಕಸನ ತರಬೇತಿ, ಬಂದೂಕು ತರಬೇತಿ, ಸೇನೆಯಲ್ಲಿನ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ವಿವರಿಸಿದರು.
ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಭೂಮಿಕ. ಬಿ.ಜಿ ಅವರು ನಿರೂಪಣೆ ಮಾಡಿದರು ಹಾಗೂ ಅಂತಿಮ ವಾಣಿಜ್ಯ ವಿಭಾಗದ ಯಶೋಧ. ಎ.ಕೆ ಅವರು ವಂದಿಸಿದರು.

error: Content is protected !!