ಅತ್ತಿಮಂಗಲ- ಮರಗೋಡು ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ

January 20, 2021

ಸಿದ್ದಾಪುರ ಜ.20 : (ಅಂಚೆಮನೆ ಸುಧಿ) ಅತ್ತಿಮಂಗಲ- ಮರಗೋಡು ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ರಸ್ತೆ ಲೋಕೋಪಯೋಗಿ ವ್ಯಾಪ್ತಿಗೆ ಒಳಪಟ್ಟಿದ್ದರೂ ಗ್ರಾಮೀಣ ರಸ್ತೆಗಳಿಗಿಂತಲೂ ಕೆಳಮಟ್ಟದಲ್ಲಿದೆ. ಕಳೆದ ಕೆಲವು ವರ್ಷಗಳಿಂದ ರಸ್ತೆ ಅವ್ಯವಸ್ಥೆಯಿಂದ ವಾಹನ ಸಂಚಾರ ಮಾತ್ರವಲ್ಲದೆ, ಪಾದಾಚಾರಿಗಳ ಓಡಾಟಕ್ಕೂ ಕಷ್ಟವಾಗಿದೆ. ವಾಹನಗಳ ಸಂಚಾರ ಅಸಾಧ್ಯವಾಗಿದ್ದು, ಗ್ರಾಮಸ್ಥರ ಇಲ್ಲಿಯವರೆಗಿನ ಬೇಡಿಕೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಅತ್ತಿಮಂಗಲ ಗ್ರಾಮ ಸೋಮವಾರಪೇಟೆ ತಾಲ್ಲೂಕಿಗೆ ಮತ್ತು ಮರಗೋಡು ಗ್ರಾಮ ಮಡಿಕೇರಿ ತಾಲ್ಲೂಕಿಗೆ ಒಳಪಡುತ್ತದೆ. ಆದರೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಡಿಕೇರಿ ತಾಲ್ಲೂಕನ್ನು ಕಡೆಗಣಿಸಿ ಸೋಮವಾರಪೇಟೆ ತಾಲ್ಲೂಕಿಗಷ್ಟೇ ಆದ್ಯತೆ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹದಗೆಟ್ಟ ರಸ್ತೆಯನ್ನು ಒಂದು ದಿನವೂ ಪರಿಶೀಲಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಮರಗೋಡು ಗ್ರಾಮ ಬಿಜೆಪಿಯ ಭದ್ರಕೋಟೆಯಾಗಿದ್ದರೂ ಶಾಸಕರು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ ಎಂದು ಟೀಕಿಸಿದ್ದಾರೆ. ತಕ್ಷಣ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರು ಒಗ್ಗೂಡಿ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಸ್ಥಳೀಯ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.

error: Content is protected !!