ಕೊಡಗಿನ ಬೆಳೆಗಾರರ ಪಾಡು ಬಾಣಲೆಯಿಂದ ಬೆಂಕಿಗೆ

20/01/2021

ಸಿದ್ದಾಪುರ ಜ.20 : ಅಕಾಲಿಕ ಮಳೆಯಿಂದಾಗಿ ಕೊಡಗಿನ ರೈತರು ಹಾಗೂ ಬೆಳೆಗಾರರು ಬಾಣಲೆಯಿಂದ ಬೆಂಕಿಗೆ ಬಿದ್ದಂತ್ತಾಗಿದ್ದಾರೆ. ದೇಶದ ಬೆನ್ನೆಲುಬು ಎನಿಸಿಕೊಂಡವರ ಮೂಳೆಯೇ ಮುರಿದ ಸ್ಥಿತಿಯಲ್ಲಿ ಜಿಲ್ಲೆಯ ಕೃಷಿಕ ವರ್ಗವಿದೆ. ಜೀವಜಲ ಕಾವೇರಿಯ ಉಗಮ ಸ್ಥಾನ ಕೊಡಗಿನ ಜನ ಪ್ರಕೃತಿಯನ್ನೇ ದೇವರೆಂದು ಪೂಜಿಸುತ್ತಾ ಬಂದವರು. ಆದರೆ ಕಳೆದ ನಾಲ್ಕು ವರ್ಷಗಳಿಂದ ಈ ಪ್ರಕೃತಿಯೇ ಇಲ್ಲಿನ ರೈತರು ಹಾಗೂ ಬೆಳೆಗಾರರಿಗೆ ಶಾಪವಾಗಿ ಪರಿಣಮಿಸಿದೆ. ಮಹಾಮಳೆಯಿಂದ ಜಲಸ್ಫೋಟ ಉಂಟಾಗಿ ಬೆಟ್ಟಗಳು ಕುಸಿದು ಸಾವಿರಾರು ಎಕರೆ ಕೃಷಿಭೂಮಿ ನಾಶವಾದ ಘಟನಾವಳಿಗಳು ಹಸಿರಾಗಿರುವಾಗಲೇ ಇದೀಗ ವರ್ಷದ ಆರಂಭದಲ್ಲೇ ಅಕಾಲಿಕ ಮಳೆ ಆಘಾತವನ್ನುಂಟುಮಾಡಿದೆ.
ಅಕಾಲಿಕ ಮಳೆ ಸುರಿದು ಕಾಫಿ, ಭತ್ತ, ಏಲಕ್ಕಿ, ಅಡಿಕೆ ಸಂಪೂರ್ಣ ನಾಶವಾಗಿದೆ. ಗಿಡದಲ್ಲಿರುವ ಕಾಫಿ ಕೊಳೆಯುತ್ತಿದ್ದರೆ, ಒಣಗಲು ಹಾಕಿದ ಫಸಲು ಅತಿಯಾದ ಮಳೆಗೆ ಕೊಚ್ಚಿಹೋಗಿದೆ. ಕೊಯ್ಲಿಗೆ ಬಂದಿದ್ದ ಭತ್ತ ನೀರು ಪಾಲಾಗಿದೆ.
ಕಾರ್ಮಿಕರ ಕೊರತೆ, ನಿರ್ವಹಣಾ ವೆಚ್ಚ ದುಬಾರಿ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಇರುವುದು, ವನ್ಯಜೀವಿಗಳ ಹಾವಳಿ ಹೀಗೆ ಅನೇಕ ಸಮಸ್ಯೆಗಳ ನಡುವೆ ಜೀವನ ಸಾಗಿಸುತ್ತಿರುವ ಕೃಷಿಕ ವರ್ಗ ಇದೀಗ ಮತ್ತೆ ದೊಡ್ಡ ಹೊಡೆತಕ್ಕೆ ಸಿಲುಕಿದೆ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವ ಪರಿಸ್ಥಿತಿಯಲ್ಲಿರುವ ಬೆಳೆಗಾರರ ನೆರವಿಗೆ ಸರ್ಕಾರ ಅಗತ್ಯವಾಗಿ ಬರಬೇಕಿದೆ.
ತ್ಯಾಗತ್ತೂರು ವ್ಯಾಪ್ತಿಯಲ್ಲಿ 120 ಎಕರೆಗೂ ಅಧಿಕ ಪ್ರದೇಶದ ಭತ್ತ ನೀರು ಪಾಲಾಗಿದೆ. ಮುಂಡ್ರಮನೆ ಕುಟುಂಬಕ್ಕೆ ಸೇರಿದ ಭತ್ತದ ಫಸಲು ಸಂಪೂರ್ಣವಾಗಿ ನಾಶವಾಗಿದೆ. ಸ್ಥಳೀಯ ಬೆಳೆಗಾರ ಪ್ರದೀಪ್ ಎಂಬುವವರಿಗೆ ಸೇರಿದ ಕಾಫಿ ಫಸಲು ಕೊಚ್ಚಿ ಹೋಗಿದೆ. ವಾಲ್ನೂರು, ತ್ಯಾಗತ್ತೂರು, ಅಭ್ಯತ್ ಮಂಗಲ, ಸಿದ್ದಾಪುರ, ನೆಲ್ಯಹುದಿಕೇರಿ ಸುತ್ತಮುತ್ತಲ ಭಾಗಗಳಲ್ಲಿನ ರೈತರು ಹಾಗೂ ಬೆಳೆಗಾರರು ನಷ್ಟವನ್ನು ಅನುಭವಿಸಿದ್ದಾರೆ. …………….(ಅಂಚೆಮನೆ ಸುಧಿ)